ADVERTISEMENT

ಮಂಡ್ಯ | ಕಲ್ಲು ತೂರಿದ ಕಿಡಿಗೇಡಿಗಳಿಗೆ ಜಾಮೀನು ನೀಡಬೇಡಿ: ಬಿಜೆಪಿ ಮನವಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 14:32 IST
Last Updated 11 ಸೆಪ್ಟೆಂಬರ್ 2025, 14:32 IST
   

ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳಿಗೆ ಜಾಮೀನು ನೀಡಬಾರದೆಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಗುರುವಾರ ಬಿಜೆಪಿ ಕಾನೂನು ಪ್ರಕೋಷ್ಠದ ಕಾರ್ಯಕರ್ತರು ಮನವಿ ಸಲ್ಲಿಸಿದರು.

ಗಣೇಶ ಮೂರ್ತಿಯ ಮೇಲೆ ಮತ್ತು ನೆರೆದಿದ್ದ ಸಾರ್ವಜನಿಕರ ಮೇಲೆ ಕೋಮುಗಲಭೆ ಸೃಷ್ಟಿಸುವ ದುರುದ್ದೇಶದಿಂದ ಕಲ್ಲು ತೂರಲಾಗಿದೆ. ಧಾರ್ಮಿಕ ಸಂಘರ್ಷಕ್ಕೆ ಕಾರಣಕರ್ತರಾದ ವ್ಯಕ್ತಿಗಳನ್ನು, ಕುಮ್ಮಕ್ಕು ನೀಡಿ ಗಲಭೆಗೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಒಂದಾದ ಧಾರ್ಮಿಕ ಹಕ್ಕುಗಳ ಅನುಷ್ಠಾನ ಮತ್ತು ಆಚರಣಗೆ ಅಡ್ಡಿಯುಂಟು ಮಾಡುವುದು ಅಪರಾಧ ಎಂದು ತಿಳಿದಿದ್ದರೂ ಸದರಿ ಹಿಂದೂ ಧಾರ್ಮಿಕ ಆಚರಣೆಗೆ ಅಡ್ಡಿಯುಂಟು ಮಾಡಲಾಗಿದೆ. ಕೋಮುಗಲಭೆ ಸೃಷ್ಟಿಸಿರುವುದಲ್ಲದೇ ಸಾಮಾಜಿಕ ಸಮುದಾಯದ ನೆಮ್ಮದಿ ಹಾಳು ಮಾಡಿರುವುದು ಘೋರ ಅಪರಾಧ ಎಂದು ಆರೋಪಿಸಿದರು.

ADVERTISEMENT

ಈಗಾಗಲೇ ಆರೋಪಿಗಳು ಎಂದು ಗುರುತಿಸಿ ಪೊಲೀಸರು ಬಂಧಿಸಿರುವ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು. ಘಟನೆಗೆ ಕಾರಣಿಕರ್ತರಾದ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು. ಇಂತಹ ಕೋಮು ಸಂಘರ್ಷ ಸೃಷ್ಟಿಸುವ ಯಾವುದೇ ರೀತಿಯ ಘಟನೆಗಳು ಇನ್ನು ಮುಂದೆ ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಕರಣ ಖಂಡಿಸಿ ಮದ್ದೂರು ನಗರದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಿದ ಜನಸಾಮಾನ್ಯರ ಮೇಲೆ ಅವರುಗಳ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕುವ ದುರುದ್ದೇಶದಿಂದ ಪೋಲೀಸ್ ಇಲಾಖೆಯಿಂದ ಅಮಾನುಷವಾಗಿ ಸುಖಾಸುಮ್ಮನೆ ಲಾಠಿ ಚಾರ್ಜ್ ಮಾಡಲಾಗಿದೆ. ಸುಮಾರು 500ಕ್ಕೂ ಹೆಚ್ಚು ಜನರ ಮೇಲೆ ಎಫ್.ಐ.ಆರ್. ದಾಖಲಿಸಲಾಗಿದೆ. ಇದು ಖಂಡನೀಯವಾಗಿದ್ದು, ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ ಕುಮಾರ್, ಪ್ರಸನ್ನ, ಎಂ.ಎನ್‌.ರೇವಣ್ಣ, ಸುಮಂತ್‌, ಪ್ರಸನ್ನ, ಮಲ್ಲೇಶ್‌, ಸುವರ್ಣಾ, ಮಂಜು, ನರಸಿಂಹಮೂರ್ತಿ, ಚಂದ್ರಕಾಂತ್‌, ವಿಶ್ವನಾಥ್‌, ಅಯ್ಯಪ್ಪ, ಗಣೇಶ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.