ಶ್ರೀರಂಗಪಟ್ಟಣ: ದೇಶದಲ್ಲೇ ಮಾದರಿ ರಾಜ್ಯ ನಿರ್ಮಾಣ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪ್ರಶಸ್ತಿ ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಂಜೇಶಗೌಡ ಆಗ್ರಹಿಸಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಬುಧವಾರ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯಲ್ಲಿ ಅವರು ನಾಲ್ವಡಿಯವರ ಸಾಧನೆಗಳ ಕುರಿತು ಮಾತನಾಡಿದರು.
‘ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದ್ದಾರೆ. ಕಾಗದದ ಕಾರ್ಖಾನೆ, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಜೈಸೂರು ಬ್ಯಾಂಕ್, ಗಂಧದೆಣ್ಣೆ ಕಾರ್ಖಾನೆ, ಸಕ್ಕರೆ ಕಾರ್ಖಾನೆ ಸೇರಿದಂತೆ ಮಹತ್ತರ ಕಾರ್ಯಗಳನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದರು ಆ ಪ್ರಶಸ್ತಿಯ ಘನತೆ ಮತ್ತಷ್ಟು ಹೆಚ್ಚುತ್ತದೆ’ ಎಂದು ಹೇಳಿದರು.
ದಸಂಸ ಮುಖಂಡ ಗಂಜಾಂ ರವಿಚಂದ್ರ, ತಾಲ್ಲೂಕು ಕಚೇರಿ ಸಭಾಂಗಣಕ್ಕೆ ನಾಲ್ವಡಿ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು. ಕರವೇ ಮುಖಂಡ ಸಿ. ಸ್ವಾಮಿಗೌಡ, ಪಟ್ಟಣದ ಪ್ರಮುಖ ವೃತ್ತದಲ್ಲಿ ನಾಲ್ವಡಿ ಅವರ ಪ್ರತಿಮೆ ಸ್ಥಾಪಿಸಬೇಕು ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಜನಪರ ದೊರೆಯ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಲಾಗುತ್ತಿದೆ ಎಂದು ರೈತ ಮುಖಂಡ ಕೂಡಲಕುಪ್ಪೆ ನಾಗೇಂದ್ರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಬಿಇಒ ಆರ್.ಪಿ. ಮಹೇಶ್, ಹಿರಿಯ ವಕೀಲ ಸಿ. ಪುಟ್ಟಸ್ವಾಮಿ, ಮರಳಾಗಾಲ ಕೃಷ್ಣೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಂದೇಶ್, ಾಯುಷ್ ವೈದ್ಯಾಧಿಕಾರಿ ಡಾ.ರಮ್ಯಾ, ಡಾ.ಪಿ. ಮಾರುತಿ, ಸಿಡಿಪಿಒ ಅಮೃತ ಕುರಣೆ, ಎಂ. ಶೆಟ್ಟಹಳ್ಳಿ ದಿನೇಶ್, ಅಲ್ಲಾಪಟ್ಟಣ ಕುಮಾರ್, ಚಂದ್ರಶೇಖರ್, ಶಂಕರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.