ADVERTISEMENT

ಶ್ರೀರಂಗಪಟ್ಟಣ: ಭಕ್ತರ ಆರಾಧ್ಯ ದೈವ ಮರಡಿಲಿಂಗೇಶ್ವರ

12 ಅಡಿ ಎತ್ತರದ ಬೃಹತ್ ಶಿವಲಿಂಗದ ಆಕರ್ಷಣೆ: ದೇಗುಲದ ಬಳಿ ಏಳೆಂಟು ಶಿವಲಿಂಗಗಳು ಪತ್ತೆ

ಗಣಂಗೂರು ನಂಜೇಗೌಡ
Published 14 ಫೆಬ್ರುವರಿ 2026, 5:42 IST
Last Updated 14 ಫೆಬ್ರುವರಿ 2026, 5:42 IST
ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಾಗಾಲ ಗ್ರಾಮದ ಬಳಿ, ಕಾವೇರಿ ನದಿ ತೀರದಲ್ಲಿರುವ ಮರಡಿ ಲಿಂಗೇಶ್ವರ ದೇವಾಲಯದ ಮೇಲೆ ಭಕ್ತರನ್ನು ಆಕರ್ಷಿಸುವ ಬೃಹತ್‌ ಶಿವಲಿಂಗ
ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಾಗಾಲ ಗ್ರಾಮದ ಬಳಿ, ಕಾವೇರಿ ನದಿ ತೀರದಲ್ಲಿರುವ ಮರಡಿ ಲಿಂಗೇಶ್ವರ ದೇವಾಲಯದ ಮೇಲೆ ಭಕ್ತರನ್ನು ಆಕರ್ಷಿಸುವ ಬೃಹತ್‌ ಶಿವಲಿಂಗ   

ಶ್ರೀರಂಗಪಟ್ಟಣ: ‘ಮರಳಾಗಾಲದಂಥ ಊರಿಲ್ಲ, ಮರಡಿಲಿಂಗೇಶ್ವರನಂಥ ದೇವರಿಲ್ಲ’ ಎಂಬುದು ತಾಲ್ಲೂಕಿನ ಮರಳಾಗಾಲ ಗ್ರಾಮದ ಪುರಾತನ ಮರಡಿಲಿಂಗೇಶ್ವರ ದೇವಸ್ಥಾನದ ಕುರಿತು ಜನಜನಿತವಾಗಿರುವ ನಾಣ್ಣುಡಿ.

ತಾಲ್ಲೂಕಿನ ಮರಳಾಗಾಲ ಗ್ರಾಮದ ಸಮೀಪ, ಕಾವೇರಿ ನದಿ ತೀರದಲ್ಲಿರುವ ಮರಡಿಲಿಂಗೇಶ್ವರ ದೇವಾಲಯ ಶತಮಾನಗಳಷ್ಟು ಹಳೆಯದು. ಪ್ರಕೃತಿ ಸೌಂದರ್ಯದ ನಡುವೆ ಇರುವ ಈ ದೇವಾಲಯದ ಆವರಣ ಪ್ರವೇಶಿಸುತ್ತಿದ್ದಂತೆಯೇ ಭಕ್ತರು ಭಾವ ಪರವಶರಾಗುತ್ತಾರೆ. ಲಿಂಗರೂಪಿ ಮರಡಿಲಿಂಗೇಶ್ವರನಿಗೆ ನಮಿಸಿ ಪುನೀತರಾಗುತ್ತಾರೆ.‌

ಶ್ರೀರಂಗಪಟ್ಟಣ– ಬನ್ನೂರು ಮಾರ್ಗವಾಗಿ ಸಂಚರಿಸುವವರಿಗೆ ಪರ್ಲಾಂಗು ದೂರದಿಂದಲೇ ಈ ದೇವಾಲಯ ಗೋಚರಿಸುತ್ತದೆ. ದೇವಾಲಯದ ಮೇಲೆ ಸುಮಾರು 12 ಅಡಿ ಎತ್ತರದ ಬೃಹತ್ ಶಿವಲಿಂಗ ಗಮನ ಸೆಳೆಯುತ್ತದೆ.

ADVERTISEMENT

ದೇಗುಲದ ಗರ್ಭಗುಡಿಯಲ್ಲಿ ಒಂದೂವರೆ ಅಡಿ ಎತ್ತರದ ಶಿವಲಿಂಗವಿದೆ. ಪ್ರಭಾವಳಿ ಸಹಿತ ಇರುವ ಈ ಶಿವಲಿಂಗದ ಪೀಠ ಸುಮಾರು ಎರಡು ಚದರ ಅಡಿಗಳಷ್ಟಿದೆ. ಕಲ್ಲು ಚಪ್ಪಡಿಗಳಿಂದ ನಿರ್ಮಿಸಿದ್ದ ದೇವಾಲಯಕ್ಕೆ ಈಚಿನ ವರ್ಷಗಳಲ್ಲಿ ಕಾಯಕಲ್ಪ ನೀಡಲಾಗಿದೆ. ದೇವಾಲಯದ ಸುತ್ತಾಲಯ ಪಾರಂಪರಿಕ ಶೈಲಿಯಲ್ಲಿದ್ದು ಗಮನ ಸೆಳೆಯುತ್ತದೆ. ಒಳ ಪ್ರಾಂಗಣದಲ್ಲಿ ಏಕ ಕಾಲಕ್ಕೆ ನೂರು ಜನರು ಕುಳಿತು ಧ್ಯಾನ ಮಾಡುವಷ್ಟು ವಿಶಾಲವಾಗಿದೆ.

ಮರಡಿಲಿಂಗೇಶ್ವರ ಮೂರ್ತಿಯನ್ನು ‘ಮರಳಿಲಿಂಗೇಶ್ವರ’ ಎಂತಲೂ ಕರೆಯುವುದುಂಟು. ಮರಳಿ ಎಂದರೆ ಮಂಗಳಮೂರ್ತಿ ಎಂಬ ಅರ್ಥ ಋಗ್ವೇದದಲ್ಲಿದೆ. ಇಲ್ಲಿ ಶಿವಲಿಂಗ ದಕ್ಷಿಣಾಭಿಮುಖವಾಗಿದ್ದು, ಹಣೆಯ ಭಾಗದಲ್ಲಿ ‘ಓಂಕಾರ’ದ ಚಿಹ್ನೆ ಕಂಡು ಬರುತ್ತದೆ. ಅಘೋರ ರೂಪಿಯಾದ ಶಿವನು ಋಣಾತ್ಮಕ ಅಂಶಗಳು ನಿವಾರಣೆ ಮಾಡುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಶಿವನ ಜತೆಗೆ ಪಾರ್ವತಿ ಕೂಡ ಇಲ್ಲಿ ಲಿಂಗರೂಪದಲ್ಲಿರುವುದು ವಿಶೇಷ.

‘ಈ ದೇವಾಲದಲ್ಲಿ ನಮ್ಮ ತಾತ, ಮುತ್ತಾತರ ಕಾಲದಿಂದಲೂ ಮಹಾ ಶಿವರಾತ್ರಿ ಸಂಭ್ರಮದಿಂದ ನಡೆಯುತ್ತದೆ. ಸ್ಥಳೀಯರು ಮಾತ್ರವಲ್ಲದೆ ಬೇರೆ ತಾಲ್ಲೂಕು, ಜಿಲ್ಲೆಗಳ ಜನರೂ ಮರಡಿಲಿಂಗೇಶ್ವರನಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ’ ಎಂದು ಗ್ರಾಮದ ಮುಖಂಡ ಪದ್ಮರಾಜ್‌ ತಿಳಿಸಿದ್ದಾರೆ.

ದೇವಾಲಯದ ಗರ್ಭ ಗುಡಿಯಲ್ಲಿರುವ ಪುರಾತನ ಮರಡಿಲಿಂಗೇಶ್ವರ (ಮರಳಿಲಿಂಗೇಶ್ವರ) ಲಿಂಗ

Cut-off box - ಮಹಾ ಶಿವರಾತ್ರಿ ವಿಶೇಷ ಮರಡಿಲಿಂಗೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ಸಂದರ್ಭದಲ್ಲಿ ಎರಡು ದಿನ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಮೊದಲ ದಿನ ಮರಡಿಲಿಂಗೇಶ್ವರನಿಗೆ ರುದ್ರಾಭಿಷೇಕ ಜರುಗುತ್ತದೆ. ಇಡೀ ರಾತ್ರಿ ನಾಲ್ಕು ಆಯಾಮಗಳ ಪೂಜೆ ಭಜನೆ ಕೀರ್ತನೆಗಳು ನಡೆಯುತ್ತವೆ. ಮರಳಾಗಾಲ ಮತ್ತು ಆಸುಪಾಸಿನ ಗ್ರಾಮಗಳ ಭಕ್ತರು ಜಾಗರಣೆ ಇದ್ದು ಪೂಜೆ ಸಲ್ಲಿಸುತ್ತಾರೆ. ಮಾರನೇ ದಿನ ಮಹಾ ಮಂಗಳಾರತಿ ಮತ್ತು ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದ್ದು ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಾರೆ. ‘ಮರಡಿಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ ಅರ್ಥಪೂರ್ಣವಾಗಿ ನಡೆಯುತ್ತದೆ. ದೇಗುಲದ ಬಳಿ ಈಚೆಗೆ ಏಳೆಂಟು ಶಿವಲಿಂಗಗಳು ಪತ್ತೆಯಾಗಿದ್ದು ದೇವಾಲಯದಲ್ಲಿ ಇರಿಸಲಾಗಿದೆ. ಕಾರ್ತಿಕ ಮಾಸದಲ್ಲಿ ಇಡೀ ತಿಂಗಳು ದೀಪೋತ್ಸವ ಮತ್ತು ವಿಶೇಷ ಪೂಜೆಗಳು ನಡೆಯುತ್ತವೆ’ ಎಂದು ದೇವಾಲಯದ ಅರ್ಚಕ ಸಿದ್ದಲಿಂಗಪ್ಪ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.