ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ. ಅನ್ನದಾನಿ
ಮಂಡ್ಯ: ‘ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಂತ್ರಿಯಾಗಲಿ ಎಂದು ದೇವರಿಗೆ ಹರಕೆ ಹೊತ್ತಿದ್ದೇನೆ’ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಎಸ್. ಶಿವಶಂಕರೇಗೌಡ ಹೇಳಿದ್ದಾರೆ. ನ್ಯಾಯಮೂರ್ತಿಯಾದವರು ಒಬ್ಬ ಶಾಸಕರ ಪರ ವಕಾಲತ್ತು ವಹಿಸುವುದು ಸರಿಯೇ? ಈ ಬಗ್ಗೆ ರಾಷ್ಟ್ರಪತಿ, ರಾಜ್ಯಪಾಲ ಮತ್ತು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು, ಕೂಡಲೇ ಅವರನ್ನು ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಮಾಜಿ ಶಾಸಕ ಕೆ. ಅನ್ನದಾನಿ ಹೇಳಿದರು.
ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ಧ ದಲಿತ ಸಮುದಾಯದವರನ್ನು ಎತ್ತಿಕಟ್ಟಿ ರಾಜ್ಯ ಸರ್ಕಾರವೇ ರಾಜ್ಯದ ಹಲವೆಡೆ ಬಂದ್ ಮಾಡಿಸುತ್ತಿದೆ. ಆದರೆ, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಅವರು ‘ರಾಜ್ಯದಲ್ಲಿರುವುದು ಅಂಬೇಡ್ಕರ್ ಸಿದ್ಧಾಂತವಲ್ಲ, ಸಿದ್ದರಾಮಯ್ಯ ಸಿದ್ಧಾಂತ’ ಎಂದು ನೀಡಿರುವ ಹೇಳಿಕೆ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ, ಇದು ಸಂವಿಧಾನಕ್ಕೆ ಅಪಮಾನವಲ್ಲವೇ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬಡವರು ಮತ್ತು ಕೂಲಿಕಾರ್ಮಿಕರೇ ಸಂಚರಿಸುವ ಸಾರಿಗೆ ಬಸ್ ಟಿಕೆಟ್ ದರವನ್ನು ರಾಜ್ಯ ಸರ್ಕಾರ ಏಕಾಏಕಿ ಶೇ 15ರಷ್ಟು ಏರಿಕೆ ಮಾಡಿ, ಜನರಿಗೆ ಗಾಯದ ಮೇಲೆ ಬರೆ ಹಾಕಿದೆ. ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವಂತೆ ಶಾಸಕರು ಅಂಗಲಾಚುತ್ತಿದ್ದರೂ ಅನುದಾನ ಕೊಡುತ್ತಿಲ್ಲ ಎಂದು ದೂರಿದರು.
ಕಿರುಗಾವಲು ಐಶ್ವರ್ಯಾಗೌಡ ಅವರ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಸುಮಾರು ₹100 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ಇಡಿ ಅಥವಾ ಸಿಬಿಐಗೆ ವಹಿಸಿ ತನಿಖೆ ನಡೆಸಬೇಕು. ಈ ಪ್ರಕರಣದ ಹಿಂದೆ ಇರುವ ಶಾಸಕರ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.