ಮಂಡ್ಯ: ‘ಶಾಲಾ ಶಿಕ್ಷಕರು, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಮಸ್ಯೆಗಳ ಇತ್ಯರ್ಥಕ್ಕೆ ಹೊಸ ಆ್ಯಪ್ ರೂಪಿಸಲಾಗಿದ್ದು ಇನ್ನು 20 ದಿನಗಳಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.
ರಾಜ್ಯಶಾಸ್ತ್ರ ಅಕಾಡೆಮಿ ವತಿಯಿಂದ ಬುಧವಾರ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಶಿಕ್ಷಕರು, ಉಪನ್ಯಾಸಕರು ಇನ್ನುಮುಂದೆ ಪಾಠ ಬೋಧನೆ ಬಿಟ್ಟು ಡಿಡಿಪಿಐ, ಡಿಡಿಪಿಯು ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಅದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಆ್ಯಪ್ ರೂಪಿಸಲಾಗಿದೆ. ಶಿಕ್ಷಕರು ಆ್ಯಪ್ ಮೂಲಕ ತಮ್ಮ ಸಮಸ್ಯೆ ಹಂಚಿಕೊಂಡರೆ ತಕ್ಷಣ ಅವುಗಳಿಗೆ ಪರಿಹಾರ ದೊರೆಯಲಿದೆ’ ಎಂದರು.
‘ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿರುವ ಕಾರಣ ಪಾಠ ಬೋಧನೆಗೆ ತೊಂದರೆಯಾಗುತ್ತಿದೆ. ಕೆಲವು ಶಿಕ್ಷಕರು, ಪಿಯು ಕಾಲೇಜು ಉಪನ್ಯಾಸಕರಿಗೆ ತಿಂಗಳುಗಟ್ಟಲೇ ಚುನಾವಣಾ ಜವಾಬ್ದಾರಿ ನೀಡುತ್ತಿರುವುದು ಸರಿಯಲ್ಲ. ಪಾಠವನ್ನಲ್ಲದೆ ಬೇರೆ ಯಾವ ಕೆಲಸಗಳಿಗೂ ಅವರನ್ನು ನಿಯೋಜನೆ ಮಾಡಬಾರದು. ಚುನಾವಣಾ ಕರ್ತವ್ಯಕ್ಕೆ ಶಿಕ್ಷಕರನ್ನು ನಿಯೋಜನೆ ಮಾಡದಂತೆ ಕೋರಿ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.
ವರ್ಗಾವಣೆಗೆ ಹೊಸ ಕಾಯ್ದೆ: ‘ಸಚಿವನಾಗಿ ಅಧಿಕಾರ ವಹಿಸಿಕೊಂಡ ದಿನವೇ ನನ್ನ ಮುಂದೆ ವರ್ಗಾವಣೆ ನೀತಿಯ ಸಮಸ್ಯೆ ಎದುರಾಯಿತು. ಕಡ್ಡಾಯ ವರ್ಗಾವಣೆ ಎಂಬುದು ಶಿಕ್ಷೆಯಾಗಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇಷ್ಟಪಟ್ಟು ಕೆಲಸ ಮಾಡುವ ಸ್ಥಳಗಳಿಗೆ ಶಿಕ್ಷಕರ ವರ್ಗಾವಣೆಯಾಗಬೇಕು. ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಹೊಸ ಕಾಯ್ದೆ ರೂಪಿಸಲಾಗುತ್ತಿದೆ. ಮಸೂದೆಯನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು’ ಎಂದು ಹೇಳಿದರು.
‘ಪದವಿಪೂರ್ವ ಕಾಲೇಜು ಡಿ ಗ್ರೂಪ್ ಹುದ್ದೆಗಳ ನೇಮಕಾತಿ ಪ್ರಸ್ತಾವವನ್ನು ಈ ಬಾರಿ ಬಜೆಟ್‌ನಲ್ಲಿ ಸೇರ್ಪಡೆ ಮಾಡಲಾಗುವುದು. 600 ಪಿಯು ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಪ್ರಾಂಶುಪಾಲರ ಹುದ್ದೆಗಳಿಗೆ ಶೀಘ್ರ ಭರ್ತಿ ಮಾಡಲಾಗುವುದು. ಬಹುತೇಕ ಶಾಲಾ, ಕಾಲೇಜುಗಳಲ್ಲಿ ಶೌಚಾಲಯ ಇಲ್ಲದಿರುವುದು ಬಹಳ ದುಖಃಕರ ಸಂಗತಿ. ಆ ಬಗ್ಗೆ ಪಟ್ಟಿ ಪಡೆದು ಅತೀ ಶೀಘ್ರದಲ್ಲಿ ಶೌಚಾಲಯ ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದರು.
ಸೆಂಟ್ರಲ್ ಜೈಲ್‌ನಲ್ಲಿ ರಾಜಕೀಯ ಪಾಠ ಕಲಿತೆ
‘ನಾನು ಓದಿದ್ದು ಕಾನೂನೂ ಶಿಕ್ಷಣ. ಕಾಲೇಜಿನಲ್ಲಿ ನಾನು ರಾಜಕೀಯ ವಿಜ್ಞಾನ ಕಲಿಯಲಿಲ್ಲ. ಆದರೆ ಸೆಂಟ್ರಲ್ ಜೈಲ್‌ನಲ್ಲಿ ನಾನು ರಾಜಕೀಯ ಪಾಠ ಕಲಿತೆ. ಲಾಲ್‌ಕೃಷ್ಣ ಆಡ್ವಾಣಿ, ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್ ಮುಂತಾದ ದಿಗ್ಗಜರು ನನ್ನ ರಾಜಕೀಯ ಗುರುಗಳು’ ಎಂದು ಸುರೇಶ್‌ಕುಮಾರ್ ಹೇಳಿದರು.
‘ತುರ್ತು ಪರಿಸ್ಥಿತಿ ಕಾಲದಲ್ಲಿ ನಾನು 15 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದೆ. ಆಗ ದಿಗ್ಗಜರೆಲ್ಲರೂ ಜೈಲು ಸೇರಿದ್ದರು. ಅವರ ಒಡನಾಟದಿಂದ ರಾಜಕೀಯ ಪಾಠ ಕಲಿತೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.