ADVERTISEMENT

ಆಧುನಿಕ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಿ: ಶಾಸಕ ಕೆ.ಎಂ.ಉದಯ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:44 IST
Last Updated 19 ಜನವರಿ 2026, 5:44 IST
ಭಾರತೀನಗರ ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ಆಧುನೀಕರಣ ಕಾಮಗಾರಿಗೆ ಶಾಸಕರಾದ ಕೆ.ಎಂ.ಉದಯ್, ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು
ಭಾರತೀನಗರ ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆ ಆಧುನೀಕರಣ ಕಾಮಗಾರಿಗೆ ಶಾಸಕರಾದ ಕೆ.ಎಂ.ಉದಯ್, ರವಿಕುಮಾರ್ ಗಣಿಗ, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಭಾನುವಾರ ಭೂಮಿಪೂಜೆ ನೆರವೇರಿಸಿದರು   

ಭಾರತೀನಗರ: ‘ನೀರು ಅತ್ಯಮೂಲ್ಯವಾಗಿದ್ದು, ರೈತರು ಅದನ್ನು ಪೋಲು ಮಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಮಿತವಾಗಿ ಬಳಕೆ ಮಾಡುವ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಕೆ.ಎಂ.ಉದಯ್‌ ಸಲಹೆ ನೀಡಿದರು.

ಸಮೀಪದ ಮುಟ್ಟನಹಳ್ಳಿ ಬಳಿಯ ಸೂಳೆಕೆರೆಯ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಈ ಭಾಗದ ರೈತರು ಕಾಲಾಂತರಗಳಿಂದಲೂ ನೀರು ನೋಡುತ್ತಾ ಬಂದಿದ್ದಾರೆ. ಆದರೆ ಶಿಂಷಾ ನದಿಯ ಆಚೆಗಿನ ಬೆಳ್ಳೂರು, ಕೂಳಗೆರೆ, ಬನ್ನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರು ನೀರಿಗಾಗಿ ಪ್ರತಿದಿನ ಪರಿತಪಿಸುತ್ತಾರೆ’ ಎಂದು ಹೇಳಿದರು.

‘ಸೂಳೆಕೆರೆಯಲ್ಲಿ ಅತಿಕ್ರಮಣವಾಗಿದ್ದ 300 ಎಕರೆಯಷ್ಟು ಜಾಗವನ್ನು ತೆರವುಗೊಳಿಸಿದ್ದು, ಶೀಘ್ರ ಕೆರೆ ಆಧುನೀಕರಣ ಕಾಮಗಾರಿಯನ್ನು ಮುಗಿಸುವಂತೆಯೂ ನೋಡಿಕೊಳ್ಳಲಾಗುವುದು. ಇದಲ್ಲದೆ ದೊಡ್ಡ ನಾಲೆಗಳ ಆಧುನೀಕರಣಕ್ಕೂ ಕ್ರಮಕೈಗೊಳ್ಳಲಾಗಿದ್ದು, ಇದರಿಂದ ಕೊನೆ ಭಾಗದ ನಾಲೆಗಳಿಗೂ ನೀರು ತಲುಪುವಂತಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಶಾಸಕ ರವಿಕುಮಾರ್‌ ಗಣಿಗ ಮಾತನಾಡಿ, ‘₹80 ಕೋಟಿಗೂ ಅಧಿಕ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಲ್ಳಾಗಿದ್ದು, ಮದ್ದೂರು, ಮಂಡ್ಯ ಕ್ಷೇತ್ರದಲ್ಲಷ್ಟೇ ಅಭಿವೃದ್ಧಿ ಕಾಮಗಾರಿಗೆ ಹಣ ತರಲಾಗಿದೆ. ಕೆ.ಎಂ.ಉದಯ್‌ ಅವರು ‌₹1200 ಕೋಟಿಯಷ್ಟು ಅನುದಾನ ತಂದು ಮದ್ದೂರು ಪಟ್ಟಣವನ್ನು ವಿಭಿನ್ನವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

ಮಂಡ್ಯದಿಂದ ಬರುವ ಕೊಳಚೆ ನೀರು ಸೂಳೆಕೆರೆಗೆ ಸೇರುತ್ತಿದ್ದು, ₹32 ಕೋಟಿ ವೆಚ್ಚದಲ್ಲಿ ಬೇರೊಂದು ನಾಲೆಯ ಮೂಲಕ ಮಂಡ್ಯದ ಕೊಳಚೆ ನೀರನ್ನು ಹರಿಸಲು ಕಾರ್ಯಯೋಜನೆ ರೂಪಿಸಿದ್ದು, ಶೀಘ್ರ ಕಾಮಗಾರಿ ಮುಗಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಮಾತನಾಡಿ, ‘1862ರಲ್ಲಿ ಕೊಪ್ಪ ಬಳಿಯ ತಗ್ಗಹಳ್ಳಿ ಬಳಿ ನಾಲೆಗಳನ್ನು ನಿರ್ಮಿಸಿ ವಿದ್ಯುತ್‌ಚ್ಛಕ್ತಿ ತಯಾರಿಸಲು ಯೋಜನೆ ರೂಪಿಸಲಾಗಿತ್ತು. ಅದಾದ ನಂತರ 1911ರಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯನ್ನು ಕಟ್ಟಲು ಅಂದಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅಡಿಗಲ್ಲು ಹಾಕಿದ್ದರು. ಇದರ ಫಲವಾಗಿ ಜಿಲ್ಲೆಯ 1,082 ಹೆಕ್ಟೇರ್‌ನಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ನಿರ್ದೇಶಕ ಪಿ.ಸಂದರ್ಶ್, ಕಿಸಾನ್‌ ರೈತ ಸಂಘದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ, ಮನಮುಲ್ ನಿರ್ದೇಶಕ ಹರೀಶ್‌ಬಾಬು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ಬಸವರಾಜು, ಭಾರತೀನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎ.ಎಸ್‌.ರಾಜೀವ್, ರೈತ ಮುಖಂಡ ಬೋರಾಪುರ ಶoಕರೇಗೌಡ, ಚಾಂಷುಗರ್ಸ್‌ ಉಪಾಧ್ಯಕ್ಷ ಆರ್.ಮಣಿ, ಮುಖಂಡರಾದ ಮಮತಾ, ಮಮತಾ ಶಂಕರೇಗೌಡ, ಮುಟ್ಟನಹಳ್ಳಿ ಮೂಲೆಹಟ್ಟಿ ಚಂದ್ರು, ಕದಲೂರು ರಾಮಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.