ADVERTISEMENT

ಗಗನಚುಕ್ಕಿ ಟೋಲ್‌ ಪ್ಲಾಜಾ ಮುಚ್ಚಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 6:05 IST
Last Updated 31 ಡಿಸೆಂಬರ್ 2025, 6:05 IST
ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಮ ನಿರ್ದೇಶನ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು 
ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ನಾಮ ನಿರ್ದೇಶನ ಸದಸ್ಯರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು    

ಮಂಡ್ಯ: ‘ಮಳವಳ್ಳಿ ಸಮೀಪ ಹಾದುಹೋಗಿರುವ ಕನಕಪುರ–ಕೊಳ್ಳೇಗಾಲ (ಎನ್‌.ಎಚ್‌– 209) ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳು ಪೂರ್ಣಗೊಳ್ಳುವವರೆಗೆ ಗಗನಚುಕ್ಕಿ ಟೋಲ್‌ ಪ್ಲಾಜಾವನ್ನು ಮುಚ್ಚಿ, ಟೋಲ್‌ ಸಂಗ್ರಹ ಮಾಡಬೇಡಿ’ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಹಲಗೂರು–ಮುತ್ತತ್ತಿ ನಡುವೆ ಅಂಡರ್‌ಪಾಸ್‌ ನಿರ್ಮಾಣ, ಮಳವಳ್ಳಿ ಪಟ್ಟಣದಲ್ಲಿ ದ್ವಿಪಥದಿಂದ ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಐಬಿ ಸರ್ಕಲ್‌ ಅಭಿವೃದ್ದಿ ಕಾಮಗಾರಿಗಳು ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿವೆ. ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಭೂಮಿಯನ್ನು ನಾವು ಕೊಡಲು ಸಿದ್ಧವಿದ್ದೇವೆ. ಆದರೂ ಕಾಮಗಾರಿ ವಿಳಂಬ ಮಾಡುತ್ತಿರುವುದು ಏಕೆ? ಎಂದು ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು. 

‘ಮೂಲ ಡಿಪಿಆರ್‌ನಲ್ಲಿ ಈ ಕಾಮಗಾರಿಗಳು ಸೇರ್ಪಡೆಗೊಂಡಿಲ್ಲ. ಹೆಚ್ಚುವರಿ ಕಾಮಗಾರಿ ಕೈಗೊಳ್ಳಲು ಪ್ರಾಧಿಕಾರದ ಕೇಂದ್ರ ಕಚೇರಿಯಿಂದ ಅನುಮತಿ ಪಡೆಯಲು ಪತ್ರ ಬರೆದಿದ್ದೇವೆ’ ಎಂದು ಪ್ರಾಧಿಕಾರದ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಉತ್ತರಿಸಿದರು. ಇದಕ್ಕೆ ಕುಪಿತರಾದ ಶಾಸಕರು, ‘ಮುಖ್ಯ ಕಾರ್ಯದರ್ಶಿ ಕಚೇರಿಗೆ ನಿಮ್ಮ ಹಿರಿಯ ಅಧಿಕಾರಿಗಳನ್ನು ಕರೆಸಿ, ಸಮಸ್ಯೆಗಳನ್ನು ಪರಿಹರಿಸಲು ತಿಳಿಸಿ. ಅದು ನಿಮ್ಮ ಕರ್ತವ್ಯ’ ಎಂದರು. 

ADVERTISEMENT

ಸರ್ವಿಸ್‌ ರಸ್ತೆ ನಿರ್ಮಿಸಿ: 

ಮಂಡ್ಯ ಜಿಲ್ಲೆಯಲ್ಲಿ ಮೈಸೂರು –ಕುಶಾಲನಗರ ಹೆದ್ದಾರಿಯು 14 ಕಿ.ಮೀ. ನಿರ್ಮಾಣವಾಗಬೇಕಿದೆ. ಸರ್ವಿಸ್‌ ರಸ್ತೆ ಮಾಡದಿದ್ದರೆ ಹೆದ್ದಾರಿ ನಿರ್ಮಿಸಲು ಬಿಡುವುದಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿರುವ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಕುಮಾರ ಅವರು ಸಭೆಗೆ ಗಮನಕ್ಕೆ ತಂದರು. ಶಾಸಕ ನರೇಂದ್ರಸ್ವಾಮಿ ಪ್ರತಿಕ್ರಿಯಿಸಿ, ‘ಹೆದ್ದಾರಿಯಲ್ಲಿ ಮೋಜು ಮಾಡಿಕೊಂಡು ಹೋಗುವವವರಿಗೆ ನಮ್ಮ ರೈತರೇಕೆ ಭೂಮಿ ಕೊಡಬೇಕು. ರೈತರಿಗೆ ಅನುಕೂಲವಾಗುವಂತೆ ಎರಡೂ ಕಡೆ ಸರ್ವಿಸ್‌ ರಸ್ತೆ ನಿರ್ಮಾಣ ಅಗತ್ಯ’ ಎಂದರು.

ವರದಿ ಕೊಡಿ:

ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಆಹಾರ, ಸಮವಸ್ತ್ರ, ಶೂ ಇತ್ಯಾದಿ ಸೌಲಭ್ಯಗಳು ಸಿಗದೇ ಇರುವುದನ್ನು ಖಂಡಿಸಿ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಲ್ಲಿರುವ ನ್ಯೂನತೆ ಮತ್ತು ಕುಂದುಕೊರತೆ ಬಗ್ಗೆ ಪರಿಶೀಲಿಸಿ ವರದಿ ಕೊಡಿ ಎಂದು ಸಿಇಒ ಅವರಿಗೆ ಸಚಿವರು ಸೂಚಿಸಿದರು. 

ಅಂತರ್‌ಜಾತಿ ವಿವಾಹ ಪ್ರೋತ್ಸಾಹಧನ ಕೊಡಲು ವಿಳಂಬವಾಗಿರುವ ಬಗ್ಗೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧಿಕಾರಿ ವಿರುದ್ಧ ಕೆಂಡಾಮಂಡಲರಾದರು. ಸರಿಯಾಗಿ ಫಾಲೋಅಪ್‌ ಮಾಡದೇ ಬೇಜವಾಬ್ದಾರಿ ಉತ್ತರ ಕೊಟ್ಟರೆ, ಸಸ್ಪೆಂಡ್‌ ಮಾಡಿಸುತ್ತೇನೆ ಎಂದರು. ‘ಕೇಂದ್ರ ಕಚೇರಿಗೆ ಅನುದಾನ ಬಿಡುಗಡೆ ಮಾಡಲು ಪತ್ರ ಬರೆಯಲಾಗಿದೆ’ ಎಂದು ಅಧಿಕಾರಿ ಉತ್ತರಿಸಿದರು. 

‘ಪವರ್‌ ಸ್ಟೇಷನ್‌ಗೆ ಜಾಗ ಗುರುತಿಸಿ’ ಕೆಪಿಟಿಸಿಎಲ್‌ನಿಂದ ಈಗಾಗಲೇ ಕೆ.ಆರ್‌.ಪೇಟೆ ಮತ್ತು ನಾಗಮಂಗಲದಲ್ಲಿ 220 ಕೆ.ವಿ. ಸ್ಟೇಷನ್‌ ಸ್ಥಾಪಿಸಲಾಗಿದೆ. ಮಂಡ್ಯ ಮದ್ದೂರಿನಲ್ಲೂ ಸ್ಥಾಪಿಸಲು ಪ್ರಕ್ರಿಯೆ ಜಾರಿಯಲ್ಲಿದೆ. 66 ಕೆ.ವಿ. ಸಾಮರ್ಥ್ಯದ ಸ್ಟೇಷನ್‌ಗಳನ್ನು ಸ್ಥಾಪಿಸಲು ಅಗತ್ಯವಾದ ಜಾಗ ಗುರುತಿಸಿ ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಸಿಇಒ ತಹಶೀಲ್ದಾರ್‌ ಸೂಚಿಸಿದ ಕೆಲಸಗಳನ್ನು ವಿವಿಧ ಇಲಾಖೆಗಳ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ತೋರಿದರೆ ಅಮಾನತು ಆಗುತ್ತೀರಿ. ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಗ್ರಾಮ ಆಡಳಿತ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಲು ವ್ಯವಸ್ಥೆ ಕಲ್ಪಿಸಿ ಎಂದರು. 

ಅನುದಾನ ಬಿಡುಗಡೆ ಮಾಡಿಸಿ: ಸಿಇಒ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ ‘ಮಂಡ್ಯ ಜಿಲ್ಲೆಯಲ್ಲಿ ನರೇಗಾ ಯೋಜನೆಗೆ ಸಂಬಂಧಿಸಿದಂತೆ 2018ರಿಂದ ಇಲ್ಲಿಯವರೆಗೆ ₹94 ಕೋಟಿ ಹಣ ಬಿಡುಗಡೆಯಾಗಬೇಕಿದ್ದು ಇದುವರೆಗೆ ₹9 ಕೋಟಿ ಮಾತ್ರ ಬಿಡುಗಡೆಯಾಗಿದೆ. ಅನುದಾನ ಬಿಡುಗಡೆ ಮಾಡಿಸಿಕೊಡಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.