ADVERTISEMENT

‘ನಿಖಿಲ್‌ ಎಲ್ಲಿದ್ದೀಯಪ್ಪ’ ಸಿನಿಮಾ ಮಾಡುವೆ: ನಿಖಿಲ್‌

​ಪ್ರಜಾವಾಣಿ ವಾರ್ತೆ
Published 10 ಮೇ 2019, 14:25 IST
Last Updated 10 ಮೇ 2019, 14:25 IST
ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ   

ಕೆ.ಆರ್‌.ಪೇಟೆ: ‘ಹತ್ತು ಚುನಾವಣೆ ಎದುರಿಸಿದ ಅನುಭವ ಕೇವಲ 45 ದಿನಗಳಲ್ಲಿ ಸಿಕ್ಕಿದೆ. ‘ನಿಖಿಲ್‌ ಎಲ್ಲಿದ್ದೀಯಪ್ಪ’ ಟ್ರೋಲ್‌ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಯಾರಿಗೂ ಆ ಟೈಟಲ್‌ ನೀಡುವುದಿಲ್ಲ. ನಾನೇ ಆ ಸಿನಿಮಾ ಮಾಡುತ್ತೇನೆ’ ಎಂದು ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಶುಕ್ರವಾರ ಹಾಸ್ಯ ಚಟಾಕಿ ಹಾರಿಸಿದರು.

ಪಟ್ಟಣದಲ್ಲಿ ನಡೆದ ಪುರಸಭೆ ಚುನಾವಣೆಯ ಟಿಕೆಟ್‌ ಆಕ್ಷಾಂಕ್ಷಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿರೋಧಿಗಳು ನನ್ನನ್ನು ಅವಮಾನಿಸಲು ಮಾಡಿದ್ದ ವಿಡಿಯೊ ನನಗೆ ಹೆಚ್ಚು ಪ್ರಸಿದ್ಧಿ ನೀಡಿತು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಡಿಯೊ ನೋಡಿ, ಟ್ರೋಲ್‌ ಮಾಡಿದ್ದಾರೆ. ಫಿಲಂ ಚೇಂಬರ್‌ನಲ್ಲೂ ಆ ಟೈಟಲ್‌ಗೆ ಬೇಡಿಗೆ ಹೆಚ್ಚಾಗಿದೆ. ಪುಟ್ಟರಾಜಣ್ಣ (ಸಚಿವ ಸಿ.ಎಸ್‌.ಪುಟ್ಟರಾಜು) ನಿರ್ಮಾಪಕರಾಗುತ್ತಾರೆ, ನಾನೇ ಅಭಿನಯಿಸುತ್ತೇನೆ’ ಎಂದು ನಗೆ ಬುಗ್ಗೆ ಸೃಷ್ಟಿಸಿದರು.

ADVERTISEMENT

‘ನಿಖಿಲ್‌ಗೆ ಹಿನ್ನಡೆ ಆಗುತ್ತಿದೆ ಎಂದು ಮಾಧ್ಯಮಗಳು ಎಚ್ಚರಿಕೆ ನೀಡಿದ ಕಾರಣದಿಂದಲೇ ನಾವು ಬಹಳ ಎಚ್ಚರಿಕೆಯಿಂದ ಕಾರ್ಯತಂತ್ರ ರೂಪಿಸಿಲು ಸಾಧ್ಯವಾಯಿತು. ನಾನು ಮಾದ್ಯಮಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಚುನಾವಣೆಯ ನಂತರ ಮಂಡ್ಯಕ್ಕೆ ಬಂದಿಲ್ಲ, ವಿಶ್ರಾಂತಿಯಲ್ಲಿದ್ದಾರೆ ಎಂಬ ಚರ್ಚೆ ನಡೆಯುತ್ತಿವೆ. ಆದರೆ ನಾನು ಜಿಲ್ಲೆಯಲ್ಲಿ ಸ್ಮಾರ್ಟ್‌ ಶಾಲಾ, ಕಾಲೇಜುಗಳ ಸ್ಥಾಪನೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ’ ಎಂದರು.

ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ ‘ಜಿಲ್ಲೆಯ ಯಾವ ಮೀರ್ ಸಾಧಕರಿಂದಲೂ ನಿಖಿಲ್ ಗೆಲುವನ್ನು ತಡೆಗಟ್ಟಲು ಸಾಧ್ಯವಿಲ್ಲ, ಮೇ 23 ರಂದು ಫಲಿತಾಂಶ ಪಕ್ಕಾ ಆಗಿದ್ದು ಮಾಧ್ಯಮಗಳು ವಿಶ್ಲೇಷಣೆಗೆ ತಯಾರಾಗಿರಲಿ. ದೇವೇಗೌಡರು ಶ್ರಮ ಮತ್ತು ಬೆವರಿನಿಂದ ಕಟ್ಟಿದ ಪಕ್ಷ ನಮ್ಮದು. ಪಕ್ಷವನ್ನು ಮುಗಿಸಲು ಕೆಲವರು ಸಂಚು ಮಾಡುತ್ತಿದ್ದಾರೆ. ಆದರೆ ಅವರು ಸಫಲರಾಗುವುದಿಲ್ಲ’ ಎಂದರು.

‘ನಾನು ಬೆಂಗಳೂರಿನಲ್ಲಿ ನೀಡಿದ್ದ ಹೇಳಿಕೆಯನ್ನು ತಿರುಚಲಾಗಿದೆ. ಸಿದ್ದರಾಮಯ್ಯ ಮತ್ತು ದೇವೇಗೌಡರ ಸಂಬಂಧದ ಬಗ್ಗೆ ನಾನು ಮಾತನಾಡಿಲ್ಲ. ಸೋತವರ ವಿಶ್ವಾಸ ಪಡೆಯುವ ಬಗ್ಗೆಯೂ ಹೇಳಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.