
ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಜನರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೊಬೈಲ್ ಕ್ಯಾಂಟೀನ್ ಖರೀದಿಗೆ ₹5 ಲಕ್ಷ ಸಹಾಯಧನ ವಿತರಣೆ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ 2024-25ನೇ ಸಾಲಿನ ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ಖರೀದಿಗಾಗಿ ₹5 ಲಕ್ಷಗಳ ಸಹಾಯಧನ ವಿತರಣೆ ಯೋಜನೆಯಡಿ ಸಹಾಯಧನ ಬಿಡುಗಡೆ ಮಾಡುವ ಸಂಬಂಧ ಗುರುವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಯೋಜನೆಯಡಿ ಜಿಲ್ಲೆಯಲ್ಲಿ 11 ಮಂದಿಗೆ ಸಹಾಯಧನ ನೀಡುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಆರು ಫಲಾನುಭವಿಗಳಿಗೆ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಒಂದು ತಿಂಗಳ ಉದ್ಯಮಶೀಲತಾ ತರಬೇತಿ ನೀಡಲಾಗಿದೆ ಎಂದರು.
ಉಳಿದ ಐವರಿಗೆ ಎರಡನೇ ಹಂತದ ತರಬೇತಿ ಈಗಾಗಲೇ ಪ್ರಾರಂಭಿಸಲಾಗಿದೆ. ಸಹಾಯಧನ ಪಡೆದವರು ಆರ್ಥಿಕ ನೆರವನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಸಹಾಯಧನದ ಮೊತ್ತವನ್ನು ಸಂಪೂರ್ಣವಾಗಿ ಉದ್ಯಮಶೀಲತೆಗೆ ಬಳಸಿಕೊಳ್ಳಬೇಕು. ಕಳೆದ ಐದು ವರ್ಷಗಳ ಮಾಹಿತಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿಗರು ಸೇರುವ ಸ್ಥಳಗಳ ಅನ್ವಯ ಅರ್ಹ ಆರು ಫಲಾನುಭವಿಗಳಿಗೆ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಮೊಬೈಲ್ ಕ್ಯಾಂಟೀನ್ ಸ್ಥಾಪನೆ ಮಾಡಲು ಸೂಕ್ತ ಸ್ಥಳ ಗುರುತಿಸಿ ಎಂದು ಹೇಳಿದರು.
ಅರ್ಹ ಫಲಾನುಭವಿಗಳು ಸಹಾಯಧನದಿಂದ ಖರೀದಿಸಿದ ವಾಹನಗಳನ್ನು ಇತರರಿಗೆ ವರ್ಗಾಯಿಸುವಂತಿಲ್ಲ. ಫಲಾನುಭವಿಗಳಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮುಖಾಂತರ ಹೇಗೆ ಅನುಮತಿ ಪಡೆಯಬೇಕು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಹೇಳಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಮೋಹನ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.
ಆಯ್ಕೆಯಾದ ಫಲಾನುಭವಿಗಳು ಪ್ರವಾಸಿಗರಿಗೆ ಶುಚಿ–ರುಚಿಯಾದ ಆಹಾರ ನೀಡಬೇಕು. ಬಳಸಿದ ಎಣ್ಣೆಗಳನ್ನು ಮತ್ತೆ ಬಳಸುವಂತಿಲ್ಲ. ಡ್ರೆಸ್ ಕೋಡ್ ಕಡ್ಡಾಯಕುಮಾರ ಜಿಲ್ಲಾಧಿಕಾರಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.