ADVERTISEMENT

ಮೋದಿ ಆಗಮನ: ಭರದ ಸಿದ್ಧತಾ ಕಾರ್ಯ

ಗೆಜ್ಜಲಗೆರೆ ಕಾಲೊನಿಯಲ್ಲಿ ನಡೆಯಲಿರುವ ಫಲಾನುಭವಿಗಳ ಸಮಾವೇಶ: ಅಧಿಕಾರಿಗಳಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2023, 6:17 IST
Last Updated 10 ಮಾರ್ಚ್ 2023, 6:17 IST
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸ್ಥಳದಲ್ಲಿ ಸಿದರ್ಧತೆ ನಡೆಯುತ್ತಿದೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸುವ ಕಾರ್ಯಕ್ರಮದ ಸ್ಥಳದಲ್ಲಿ ಸಿದರ್ಧತೆ ನಡೆಯುತ್ತಿದೆ   

ಮದ್ದೂರು: ಜಿಲ್ಲೆಗೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಸಕಲ ಸಿದ್ಧತೆ ನಡೆದಿದ್ದು, ತಾಲ್ಲೂಕಿನ ಗೆಜ್ಜಲಗೆರೆ ಕಾಲೊನಿಯಲ್ಲಿ ಫಲಾನುಭವಿಗಳ ಸಮಾವೇಶ ಮತ್ತು ದಶಪಥ ರಸ್ತೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್‌ 12 ರಂದು ನರೇಂದ್ರ ಮೋದಿ ಅವರು ರೋಡ್‌ ಶೋ ಮುಗಿಸಿ ಗೆಜ್ಜಲಗೆರೆ ಕಾಲೊನಿಯಲ್ಲಿ ಆಯೋಜಿಸಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸುವರು.

ಗೆಜ್ಜಲಗೆರೆ ಕಾಲೊನಿಯ, ಹೆದ್ದಾರಿಗೆ ಹೊಂದಿಕೊಂಡಂತಿರುವ ಸುಮಾರು 20 ಎಕರೆಯ ವಿಶಾಲ ಜಾಗದಲ್ಲಿ ಬೃಹತ್ ವೇದಿಕೆ ಸಿದ್ಧಗೊಳ್ಳುತ್ತಿದೆ. ಸುಮಾರು 3 ಲಕ್ಷ ಫಲಾನುಭವಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ADVERTISEMENT

ಭಾಗವಹಿಸುವವರು ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಬೃಹತ್ ಟೆಂಟ್ ಹಾಕಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌.ಯತೀಶ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಸಿದ್ಧತೆ ಪರಿಶೀಲನೆ ನಡೆಸುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಸಾವಿರಾರು ಬಸ್‌ಗಳು ನಿಲ್ಲಲು, ವೇದಿಕೆಯ ಹಿಂದಿನ ಪ್ರದೇಶದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ವಾಹನಗಳು ಬರಲು ಸದೋಳಲು- ಗೆಜ್ಜಲಗೆರೆ ಗ್ರಾಮಗಳ ನಡುವಿನ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ.

ಸಭೆಗೆ ಬರುವ ಲಕ್ಷಾಂತರ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಊಟಕ್ಕೆಂದು ಸುಸಜ್ಜಿತ ಪ್ರತ್ಯೇಕ 100ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಭದ್ರತೆಗಾಗಿ ಸುಮಾರು 2,300 ಕಾನ್‌ಸ್ಟೆಬಲ್‌, 5 ಎಸ್‌ಪಿ, 20 ಡಿವೈಎಸ್‌ಪಿ, 67 ಎಸ್‌ಐಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.