ADVERTISEMENT

ಮುಂಗಾರು ಮಳೆ; ಗರಿಗೆದರಿದ ಕೃಷಿ

ಮಂಡ್ಯ ಜಿಲ್ಲೆಯಲ್ಲಿ 1.92 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ: ಬಿತ್ತನ ಬೀಜ, ರಸಗೊಬ್ಬರಕ್ಕಿಲ್ಲ ಕೊರತೆ

ಸಿದ್ದು ಆರ್.ಜಿ.ಹಳ್ಳಿ
Published 26 ಜುಲೈ 2025, 7:12 IST
Last Updated 26 ಜುಲೈ 2025, 7:12 IST
ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ಭತ್ತದ ನಾಟಿ ಮಾಡಲು ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಹದ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಸಂತೋಷ್‌ ಚಂದ್ರಮೂರ್ತಿ 
ಮಂಡ್ಯ ತಾಲ್ಲೂಕಿನ ಪಣಕನಹಳ್ಳಿ ಗ್ರಾಮದಲ್ಲಿ ಭತ್ತದ ನಾಟಿ ಮಾಡಲು ಟ್ರ್ಯಾಕ್ಟರ್ ಮೂಲಕ ಗದ್ದೆಯನ್ನು ಹದ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಸಂತೋಷ್‌ ಚಂದ್ರಮೂರ್ತಿ    

ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ಮೊದಲ ಬಾರಿಗೆ ಜೂನ್‌ನಲ್ಲೇ ಭರ್ತಿಯಾಗಿದ್ದು, ಕೃಷಿ ಚಟುವಟಿಕೆಗೆ ಜುಲೈ 22ರಿಂದಲೇ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿರುವ ಕಾರಣ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿದೆ. 

ಜಲಾಶಯ ಭರ್ತಿಯಾಗಿರುವುದು ರೈತರಿಗೆ ಸಂತಸ ತಂದಿದ್ದು, ಈಗಾಗಲೇ ಜಿಲ್ಲೆಯ ವಿವಿಧೆಡೆ ಭತ್ತ ಒಟ್ಲು ಬಿಡಲಾಗಿದೆ. ಆಗಸ್ಟ್‌ 2ನೇ ವಾರದಿಂದ ಭತ್ತದ ಪೈರು ನಾಟಿ ಕಾರ್ಯ ಆರಂಭವಾಗಲಿದೆ. 

ಪೂರ್ವ ಮುಂಗಾರುವಿನಲ್ಲಿ 25,513 ಹೆಕ್ಟೇರ್‌ ಬಿತ್ತನೆ ಗುರಿಗೆ, 24,471 (ಶೇ 95.9)ರಷ್ಟು ಸಾಧನೆಯಾಗಿದೆ. ಪೂರ್ವ ಮುಂಗಾರುವಿನಲ್ಲಿ ಎಳ್ಳು, ಅಲಸಂದೆ, ಉದ್ದು, ಹೆಸರು, ಮುಸುಕಿನ ಜೋಳ, ಕಡಲೇಕಾಯಿ, ಕಬ್ಬು ಬಿತ್ತನೆಯಾಗಿದೆ.

ADVERTISEMENT

ಈ ಬಾರಿ ಮುಂಗಾರು ಹಂಗಾಮಿನಲ್ಲಿ 1.66 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿಯಿದ್ದು, ಈಗಾಗಲೇ 15,208 ಹೆಕ್ಟೇರ್‌ (ಶೇ 9.1) ಪ್ರದೇಶದಲ್ಲಿ ವಿವಿಧ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಲಾಗಿದೆ. 

ಈ ಬಾರಿ ಭತ್ತ 55,605 ಹೆಕ್ಟೇರ್‌ ಮತ್ತು ಕಬ್ಬು 42,130 ಹೆಕ್ಟೇರ್‌ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಕಬ್ಬು (ತನಿ) ಶೇ 31.8 ಮತ್ತು ಕಬ್ಬು (ಕೂಳೆ) ಶೇ 27.5ರಷ್ಟು ಬಿತ್ತನೆಯಾಗಿದೆ.

ಹೆಚ್ಚುವರಿ ಮಳೆ: 

ಏಪ್ರಿಲ್‌ 1ರಿಂದ ಜುಲೈ 18ರವರೆಗೆ 24.1 ಸೆಂ.ಮೀ.ನಷ್ಟು ವಾಡಿಕೆ ಮಳೆಗೆ, 32.7 ಸೆಂ.ಮೀ ಮಳೆ ಸುರಿದಿದ್ದು, ವಾಡಿಕೆಗಿಂತ ಹೆಚ್ಚುವರಿ ಮಳೆಯಾಗಿದೆ. ಹೀಗಾಗಿ ಕೆರೆ–ಕಟ್ಟೆಗಳಲ್ಲಿ ನೀರು ತುಂಬಿದ್ದು, ಅಂತರ್ಜಲ ಮಟ್ಟವೂ ಹೆಚ್ಚಳವಾಗಿದೆ. ಇದರಿಂದ ಕೃಷಿ ಚಟುವಟಿಕೆಗೆ ಈ ಬಾರಿ ನೀರಿನ ಕೊರತೆಯಾಗುವುದಿಲ್ಲ ಎಂಬುದು ರೈತರ ಅಭಿಪ್ರಾಯ. 

‘ಚಿಲ್ಲರೆ ರಸಗೊಬ್ಬರ ಮಾರಾಟ ಪರವಾನಗಿ ಹೊಂದಿರುವ 283 ಖಾಸಗಿ ಮಾರಾಟಗಾರರು ಮತ್ತು 256 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ (PACS) ರಸಗೊಬ್ಬರ ಮಾರಾಟವಾಗಲಿದೆ. ಜಿಲ್ಲೆಯಲ್ಲಿ 399 ಚಿಲ್ಲರೆ ಬಿತ್ತನೆ ಬೀಜ ಮಾರಾಟಗಾರರು ಇದ್ದಾರೆ. ಜೊತೆಗೆ 31 ರೈತ ಸಂಪರ್ಕ ಕೇಂದ್ರಗಳು, 15 ರೈತ ಉತ್ಪನ್ನ ಸಂಸ್ಥೆಗಳು, 78 ಪಿ.ಎ.ಸಿ.ಎಸ್‌ನಿಂದ ಬಿತ್ತನೆ ಬೀಜ ವಿತರಣೆಯಾಗಲಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

‘ಅತಿಯಾದ ರಸಗೊಬ್ಬರದಿಂದ ಮಣ್ಣಿನ ಫಲವತ್ತತೆ ಹಾಳು’

‘ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಹಸಿರು ಗೊಬ್ಬರ ಮತ್ತು ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವುದು ಅಗತ್ಯವಿದೆ’ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.  ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿಯೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಇಲ್ಲ. ರೈತರು ಆತಂಕಕ್ಕೆ ಈಡಾಗಬಾರದು ಎಂದು ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.