ADVERTISEMENT

ಮುತ್ತತ್ತಿ | ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ: ಅಪಾರ ಸಂಖ್ಯೆಯ ಭಕ್ತರು ಭಾಗಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:46 IST
Last Updated 22 ಆಗಸ್ಟ್ 2025, 3:46 IST
<div class="paragraphs"><p>ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಗುರುವಾರ ಜಾತ್ರೋತ್ಸವ ವಿಜೃಂಭಣೆಯಿಂದ ನೆರವೇರಿತು</p></div>

ಹಲಗೂರು ಸಮೀಪದ ಮುತ್ತತ್ತಿಯಲ್ಲಿ ಗುರುವಾರ ಜಾತ್ರೋತ್ಸವ ವಿಜೃಂಭಣೆಯಿಂದ ನೆರವೇರಿತು

   

ಹಲಗೂರು: ಸಮೀಪದ ಮುತ್ತತ್ತಿಯ ಕಾವೇರಿ ನದಿಯ ದಡದಲ್ಲಿರುವ ಪುರಾಣ ಪ್ರಸಿದ್ಧ ಮುತ್ತತ್ತಿರಾಯ ದೇವರ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ಮತ್ತು ಹಾಲರವಿ ಸೇವೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಆ. 20 ರಂದು ಬುಧವಾರ ದೊಡ್ಡ ಮುತ್ತತ್ತಿಯಲ್ಲಿ ಉಪವಾಸ, ದೇವಾಲಯ ಮತ್ತು ರಥ ಮತ್ತು ದೇವರಿಗೆ ಹೂವಿನ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ನಡೆದವು. ರಾತ್ರಿ ಜಾನಪದ ಕಲಾವಿದ ಯರಹಳ್ಳಿ ಪುಟ್ಟಸ್ವಾಮಿ ಮತ್ತು ಶ್ರೀನಿವಾಸ್ ತಂಡದವರು ಜಾನಪದ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

ಗುರುವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಬಗೆಯ ಹೂಗಳಿಂದ ಆಲಂಕಾರ ಮಾಡಿದ್ದ ರಥ ಕಾವೇರಿ ನದಿಯಿಂದ ದೇವಾಲಯದವರೆಗೂ ಮೆರವಣಿಗೆಯಲ್ಲಿ ಸಾಗಿತು. ಮಧ್ಯಾಹ್ನ 3 ಗಂಟೆಗೆ ಏಳಗಳ್ಳಿ ಮುತ್ತೇಗೌಡರ ಕುಟುಂಬದವರಿಂದ ಹಾಲರವಿ ತರುವ ಸೇವಾರ್ಥ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜಾನಪದ ಕಲಾ ತಂಡದಿಂದ ವೀರಗಾಸೆ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ ಪೂಜಾ ಕುಣಿತ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.

ಹೂವಿನ ಅಲಂಕಾರದಲ್ಲಿ ಕಂಗೊಳಿಸಿದ ಮುತ್ತತ್ತಿ ಆಂಜನೇಯಸ್ವಾಮಿ

ಮಳವಳ್ಳಿ, ಬಾಳೆಹೊನ್ನಿಗ ಗ್ರಾಮದ ಆದಿ ಜಾಂಬವ ಜನಾಂಗದವರಿಂದ ಹಾಲರವಿ ಸೇವೆ ಮತ್ತು ಹಸಿ ತೆಂಗಿನಕಾಯಿ ಒಡೆಯುವ ಸೇವೆ ಭಕ್ತಾಧಿಗಳ ಗಮನ ಸೆಳೆಯಿತು. ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಉತ್ಸವ, ರಾತ್ರಿ 7 ಗಂಟೆಗೆ ಚನ್ನಪಟ್ಟಣ ತಾಲೋಕಿನ ಹುಣಸನಹಳ್ಳಿ ಗ್ರಾಮಸ್ಥರಿಂದ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ಜಾತ್ರಾ ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ವತಿಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಮೂರು ದಿನಗಳ ಕಾಲ ನಡೆದ ಜಾತ್ರಾ ಉತ್ಸವದಲ್ಲಿ ಮಳವಳ್ಳಿ, ಮಂಡ್ಯ, ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಭಕ್ತಾಧಿಗಳು ಜಾತ್ರೋತ್ಸವಕ್ಕೆ ಆಗಮಿಸಿ ಮುತ್ತತ್ತಿರಾಯನ ಕೃಪೆಗೆ ಪಾತ್ರರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.