ಮಳವಳ್ಳಿ: ನಮ್ಮ ರಾಜ್ಯ ಪೊಲೀಸರ ಕಾರ್ಯವೈಖರಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಧರ್ಮಸ್ಥಳ ಸುತ್ತಮುತ್ತಲ ಪ್ರದೇಶಗಳಲ್ಲಿ ಶವಗಳನ್ನು ಹೂತಿದ್ದಾರೆ ಎನ್ನಲಾದ ಪ್ರಕರಣದ ಸತ್ಯಾಂಶ ಹೊರಬರುವ ವಿಶ್ವಾಸ ಇದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ತಿಳಿಸಿದರು.
ಚಾಮರಾಜನಗರ ಜಿಲ್ಲೆಗೆ ತೆರಳುವ ಮಾರ್ಗಮಧ್ಯೆ ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸಾರ್ವಜನಿಕರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಕರ್ನಾಟಕ ಪೊಲೀಸರು ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಇಡೀ ದೇಶದಲ್ಲಿಯೇ ಹೆಸರು ಮಾಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಸೇರಿದಂತೆ ಅನೇಕ ತನಿಖೆಗಳಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಐಟಿ ತನಿಖಾ ತಂಡದಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಸತ್ಯದ ಮೇಲೆ ಖಂಡಿತವಾಗಿಯೂ ಬೆಳಕು ಚಲ್ಲುತ್ತದೆ ಎನ್ನುವ ನಂಬಿಕೆ ನನಗಿದೆ. ರಾಜ್ಯ ಪೊಲೀಸರ ಮೇಲೆ ಜನರು ಸಹ ನಂಬಿಕೆ ಇಟ್ಟಿದ್ದಾರೆ. ಖಂಡಿತವಾಗಿಯೂ ಶವಗಳನ್ನು ಹೂತಿರುವ ಪ್ರಕರಣದ ಸತ್ಯಾಂಶ ಹೊರ ಬರಲಿದೆ’ ಎಂದು ಹೇಳಿದರು.
ಎಸ್ಐಟಿ ತನಿಖಾ ತಂಡಕ್ಕೆ ಬಿಜೆಪಿ ವಿರೋಧ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರ ವಿರೋಧಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ, ಇಂಥ ಗಂಭೀರ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಮಾಜಿ ಅಧ್ಯಕ್ಷ ಗಂಗರಾಜೇ ಅರಸು, ಮಾಜಿ ಸದಸ್ಯ ಕಿರಣ್ ಶಂಕರ್, ಮುಖಂಡರಾದ ಚೌಡಪ್ಪ, ರಾಧಾ, ಪೇಟೆಬೀದಿ ರವಿ, ಭರತ್, ದಸ್ತಗಿರ್, ಮಹಮ್ಮದ್ ಯಾಸೀನ್, ಅಕ್ರಂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.