ADVERTISEMENT

ಕೆಲಸ ಮಾಡದವರಿಗೆ ಮತ ಹಾಕುತ್ತೀರಿ: ಸಚಿವ ಚಲುವರಾಯಸ್ವಾಮಿ ಬೇಸರ

ರಸ್ತೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:46 IST
Last Updated 29 ಜನವರಿ 2026, 6:46 IST
ನಾಗಮಂಗಲ ತಾಲ್ಲೂಕಿನ ಜೋಡಿಚಿಕ್ಕನಹಳ್ಳಿ ಮತ್ತು ನಲ್ಕುಂದಿ ಗ್ರಾಮಗಳಲ್ಲಿ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು
ನಾಗಮಂಗಲ ತಾಲ್ಲೂಕಿನ ಜೋಡಿಚಿಕ್ಕನಹಳ್ಳಿ ಮತ್ತು ನಲ್ಕುಂದಿ ಗ್ರಾಮಗಳಲ್ಲಿ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎನ್.ಚಲುವರಾಯಸ್ವಾಮಿ ಭೂಮಿಪೂಜೆ ನೆರವೇರಿಸಿದರು   

ನಾಗಮಂಗಲ: ತಾಲ್ಲೂಕಿನಲ್ಲಿ ನಾನು ಶಾಸಕನಾದ ಒಂದು ಅವಧಿಯಲ್ಲಿ, ನಾಲ್ಕು ಬಾರಿ ಶಾಸಕರಾದವರೂ ಮಾಡಲಾಗದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಆದರೂ ಕೂಡ ಚುನಾವಣೆಯಲ್ಲಿ ನನ್ನ ವಿರುದ್ಧ ಮತ ಹಾಕುತ್ತೀರಿ, ಇದಕ್ಕೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಜೋಡಿಚಿಕ್ಕನಹಳ್ಳಿ ಮತ್ತು ನಲ್ಕುಂದಿ ಗ್ರಾಮಗಳಲ್ಲಿ ಇತ್ತೀಚೆಗೆ ₹5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾಗಿದ್ದ ಕಳೆದ 2013ರಿಂದ 2018ರ ಅವಧಿಯಲ್ಲಿ ನಾಗಮಂಗಲದಿಂದ ಕೋಟೆಬೆಟ್ಟದ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 3.5 ಮೀ. ಅಗಲದ ರಸ್ತೆಯನ್ನು 5 ಮೀಟರ್‌ಗೆ ವಿಸ್ತರಿಸಿದ್ದರಿಂದ ಪಾಲಗ್ರಹಾರದ ವರೆಗೆ ನಿಂತು ಹೋಗಿತ್ತು. ನಂತರ ಶಾಸಕರಾದವರು 5 ವರ್ಷ ಕಾಲ ಈ ರಸ್ತೆಯನ್ನು ಮುಂದುವರಿಸಲಿಲ್ಲ. ಕೆಂಚೇಗೌಡಕೊಪ್ಪಲಿನಿಂದ ನಲ್ಕುಂದಿ ವರೆಗೆ ಕಿತ್ತು ಗುಂಡಿಬಿದ್ದಿದ್ದ ರಸ್ತೆಯಲ್ಲಿಯೇ ಜನರು ಅದ್ಯಾವ ರೀತಿ ಓಡಾಡಿದರೆಂದು ಗೊತ್ತಿಲ್ಲ ಎಂದರು.

ADVERTISEMENT

ಕಳೆದ ಎರಡೂವರೆ ವರ್ಷದಲ್ಲಿ ಜೋಡಿಚಿಕ್ಕನಹಳ್ಳಿ, ನಲ್ಕುಂದಿ, ತೊರೆಮಲ್ಲನಾಯ್ಕನಹಳ್ಳಿ ಸೇರಿದಂತೆ ಹರದನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ಗ್ರಾಮಗಳ ರಸ್ತೆಗಳ ಅಭಿವೃದ್ಧಿಗೆ ₹20 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಲಾಗಿದೆ. ಇದನ್ನು ಅರಿಯದೆ ನಾನು ಮಂಜೂರು ಮಾಡಿಸಿದ ಕೆಲಸಕ್ಕೆ ಪೂಜೆ ಮಾಡಲಾಗುತ್ತಿದೆ ಎಂದು ಬಾಯಿಗೆ ಬಂದಂತೆ ಮಾತಾಡುವವರಿಗೆ ನಾಚಿಕೆಯಾಗಬೇಕು. ನಾನು ಬದುಕಿರುವ ತನಕ ಇನ್ನೊಬ್ಬರು ಮಂಜೂರು ಮಾಡಿಸಿದ ಕೆಲಸಕ್ಕೆ ಪೂಜೆ ಮಾಡುವುದಿಲ್ಲ ಎಂದರು.

ಮುಖಂಡರು, ಕಾರ್ಯಕರ್ತರಲ್ಲೇ ದೋಷವಿದೆ: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಜೊತೆಗೆ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟರೆ ಬದಲಾವಣೆ ಕಾಣಬಹುದು. ಆದರೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲೇ ಸಣ್ಣ ಪುಟ್ಟ ದೋಷವಿದ್ದಂತೆ ಕಾಣುತ್ತಿದೆ. ಪ್ರತಿ ಕುಟುಂಬಕ್ಕೂ ಅನುಕೂಲ ಮಾಡಿಕೊಡಲು ಕಷ್ಟವಾಗುತ್ತದೆ. ಒಟ್ಟಾರೆ ಗ್ರಾಮದ ಅಭಿವೃದ್ಧಿ ಪೂರಕವಾಗಿ ಸಾಧ್ಯವಾದಷ್ಟು ಕೆಲಸ ಮಾಡಬಹುದು. ಹಾಗಾಗಿ ಈ ಭಾಗದ ಜನರ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಅತ್ಯವಶ್ಯಕವಾಗಿರುವ ರಸ್ತೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಕೆಎಂಎಫ್ ನಿರ್ದೇಶಕ ಎನ್.ಅಪ್ಪಾಜಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಎಂಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹರದನಹಳ್ಳಿ ನರಸಿಂಹಯ್ಯ, ಮನ್‌ಮುಲ್ ಮಾಜಿ ನಿರ್ದೇಶಕ ಡಿ.ಟಿ.ಕೃಷ್ಣೇಗೌಡ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ, ಟಿಎಪಿಸಿಎಂಎಸ್ ನಿರ್ದೇಶಕಿ ಎನ್.ಕೆ.ವಸಂತಮಣಿ, ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜು, ಮುಖಂಡರಾದ ಪುಟ್ಟಸ್ವಾಮಿಗೌಡ, ಡಿ.ಕೆ.ರಾಜೇಗೌಡ, ಮರಿಸ್ವಾಮಿ, ಆನಂದ, ನಾಗರಾಜು ಇದ್ದರು.

ನಾನು ಬದುಕಿರುವ ತನಕ ಇನ್ನೊಬ್ಬರು ಮಂಜೂರು ಮಾಡಿಸಿದ ಕೆಲಸಕ್ಕೆ ಪೂಜೆ ಮಾಡುವುದಿಲ್ಲ
–ಎನ್‌.ಚಲುವರಾಯಸ್ವಾಮಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.