ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ನಾಗಮಂಗಲ: ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಬುಧವಾರ ಮಧ್ಯಾಹ್ನ ಎಮ್ಮೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಮುಸುಕುಧಾರಿ ಬೈಕ್ ಸವಾರರಿಬ್ಬರು ಕಸಿದು ಪರಾರಿಯಾಗಿದ್ದಾರೆ.
ತಾಲ್ಲೂಕಿನ ಪಡುವಲಪಟ್ಟಣ ನಿವಾಸಿ ಜಯಮ್ಮ(60) ಹಲ್ಲೆಗೊಳಗಾಗಿ ಮಾಂಗಲ್ಯ ಕಳಕೊಂಡವರು. ಮುಸುಕುಧಾರಿ ಬೈಕ್ ಸವಾರರು ಜಯಮ್ಮ ಅವರ ಮುಖ ಮತ್ತು ಕೈಗಳ ಮೇಲೆ ಬ್ಲೇಡ್ ನಿಂದ ದಾಳಿ ಮಾಡಿದ್ದಾರೆ. ದಾಳಿಯಿಂದ ಜಯಮ್ಮ ಗಾಬರಿಗೊಂಡಾಗ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾರೆ.
ಜಯಮ್ಮ ಅವರನ್ನು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಸಂಬಂಧ ನಾಗಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.