ADVERTISEMENT

ರಾಕೇಶ್ ಟಿಕಾಯತ್‌ಗೆ ಮಸಿ ಎರಚುವಾಗ ನನ್ನ ಮೇಲೂ ಬಿದ್ದಿದೆ: ನಂದಿನಿ ಜಯರಾಂ ದೂರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 14:16 IST
Last Updated 3 ಜೂನ್ 2022, 14:16 IST
ನಂದಿನಿ ಜಯರಾಂ ಮೇಲೆ ಮಸಿ ಬಿದ್ದಿರುವುದು
ನಂದಿನಿ ಜಯರಾಂ ಮೇಲೆ ಮಸಿ ಬಿದ್ದಿರುವುದು   

ಕಿಕ್ಕೇರಿ (ಮಂಡ್ಯ ಜಿಲ್ಲೆ): ಬೆಂಗಳೂರಿನ ಗಾಂಧಿಭವನದಲ್ಲಿ ಈಚೆಗೆ ನಡೆದ ರೈತಸಂಘದ ಸಮಾರಂಭದಲ್ಲಿ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಅವರ ಮೇಲೆ ದುಷ್ಕರ್ಮಿಗಳು ಎರೆಚಿದ ರಾಸಾಯನಿಕವು ತನಗೂ ತಾಗಿದ್ದು ಚರ್ಮ ಸಮಸ್ಯೆ ಕಾಣಿಸಿಕೊಂಡಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತಸಂಘ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಜಯರಾಂ ಪಟ್ಟಣ ಠಾಣೆಗೆ ದೂರು ದಾಖಲಿಸಿದ್ದಾರೆ.

‘ದುಷ್ಕರ್ಮಿಗಳು ಟಿಕಾಯತ್‌ ಅವರ ಮೇಲೆ ದಾಳಿ ನಡೆಸಿದ್ದು ಮಸಿಯಿಂದ ಅಲ್ಲ, ಮಸಿಯಂತೆ ಕಾಣುವ ಅಪಾಯಕಾರಿ ರಾಸಾಯನಿಕ ಎರಚಿದ್ದಾರೆ. ದಾಳಿ ಸಂದರ್ಭದಲ್ಲಿ ಟಿಕಾಯತ್ ಸಮೀಪದಲ್ಲಿಯೇ ನಾನೂ ಇದ್ದೆ, ಈ ವೇಳೆ ರಾಸಾಯನಿಕ ನನ್ನ ಮೈಮೇಲೂ ಹಾರಿದ್ದು ಚರ್ಮ ಸುಟ್ಟಂತೆ ಆಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಘಟನೆಯ ನಂತರ ಕಣ್ಣು ಉರಿ ಕಾಣಿಸಿಕೊಂಡಿತು, ಬೆಂಗಳೂರಿನಲ್ಲೇ ಚಿಕಿತ್ಸೆ ಪೆಡೆದು ಊರಿಗೆ ಮರಳಿದೆ. ನಂತರ ಚರ್ಮ ತುರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಿಕ್ಕೇರಿ ಕಿಕ್ಕೇರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದೆ’ ಎಂದು ತಿಳಿಸಿದ್ದಾರೆ.

‘ಈಚೆಗೆ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಹೀನ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ತ್ವರಿತವಾಗಿ ಕ್ರಮವಹಿಸಬೇಕಿದೆ. ಪೊಲೀಸರು ಇರುವ ಜಾಗದಲ್ಲೇ ಈ ರೀತಿ ನಡೆದರೆ ಏನೆಂದು ಹೇಳಬೇಕು? ದೆಹಲಿ ರೈತ ಹೋರಾಟದಲ್ಲಿ ಪಾಲ್ಗೊಂಡ ನೂರಾರು ರೈತರು, ಮುಖಂಡರು ಜೀವ ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕಿಂಚಿತ್ತೂ ಯೋಚಿಸದ ಸರ್ಕಾರಗಳು ಅವರಿಗೆ ರಕ್ಷಣೆ ನೀಡುವಲ್ಲೂ ವಿಫಲವಾಗಿವೆ’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.