ಮಂಡ್ಯ: ‘ನಮ್ಮ ದೇಶದಲ್ಲಿ ಸರಿಸುಮಾರು ₹25 ಕೋಟಿಗೂ ಹೆಚ್ಚಿನ ಜನರು ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ. ಅದರಲ್ಲಿ ಯುವ ಜನತೆಯ ಪ್ರಮಾಣವೇ ಹೆಚ್ಚು. ಮಾದಕ ವಸ್ತುಗಳ ಸೇವನೆಯಿಂದ ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ರಾಜ್ಯ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಪ್ರತಾಪ್ ಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದ ಪಿ.ಇ.ಎಸ್ ಎಂಜಿನಿಯರಿಂಗ್ ಕಾಲೇಜಿನ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ಪಿ.ಇ.ಎಸ್ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ‘ನಶಾ ಮುಕ್ತ ಭಾರತ’ ಅಭಿಯಾನ ಬೈಕ್ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ 1ರಿಂದ 31ರವರೆಗೆ ಭಾರತದಾದ್ಯಂತ ನಶಾ ಮುಕ್ತ ಭಾರತ ಅಭಿಯಾನ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ದೇಶದಲ್ಲಿ 3.1 ಕೋಟಿಗೂ ಅಧಿಕ ಜನರು ಗಾಂಜಾ ವ್ಯಸನಿಗಳಾಗಿದ್ದಾರೆ. ಇದರಿಂದ ಅವರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ರಾಜ್ಯದಲ್ಲಿ 6.5 ಲಕ್ಷ ಎನ್.ಎಸ್.ಎಸ್. ಸ್ವಯಂಸೇವಕರಿದ್ದಾರೆ. 14 ಕೋಟಿಗೂ ಹೆಚ್ಚಿನ ಯುವ ಜನತೆ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಗೃಹ ಇಲಾಖೆಯ ಅಭಿಷೇಕ್, ಮೈ ಭಾರತ್ ಪೋರ್ಟಲ್ ನ ಮುಸ್ತಫಾ, ಮಾಜಿ ಮಿಸಸ್ ಇಂಡಿಯಾ ರೇಣುಕಾ, ಬೈಕ್ ರೈಡರ್ ಡಾ.ಜಾಫರ್, ಪಿ.ಇ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಷಣ್ಮುಗಂ ಕೆ. ಮಾತನಾಡಿದರು.
ನಂತರ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರುವಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲಾ, ಬೈಕ್ ರೈಡರ್ಸ್ ಪಿ.ಇ.ಎಸ್ ಕಾಲೇಜಿನ ಭೋದಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೇಶದಲ್ಲಿ 3.1 ಕೋಟಿ ಗಾಂಜಾ ವ್ಯಸನಿಗಳು ಆ.1ರಿಂದ 31ರವರೆಗೆ ‘ನಶಾ ಮುಕ್ತ ಭಾರತ’ ಅಭಿಯಾನ
ದುಶ್ಚಟಗಳಿಂದ ದೂರವಿರಿ’
ಕರ್ನಲ್ ಜಗದೀಪ್ ಸಿಂಗ್ ಮಾತನಾಡಿ ‘ಯುವ ಜನತೆ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ದುಶ್ಚಟಗಳಿಂದ ದೂರವಿರಬಹುದು. ಯುವ ಜನತೆ ನಮ್ಮ ದೇಶದ ಶಕ್ತಿ. ಯುವಕರು ಭಾರತೀಯ ಸೇನೆಯಲ್ಲಿ ಬಂದು ದೇಶ ಸೇವೆ ಮಾಡಿ’ ಎಂದು ಕರೆ ನೀಡಿದರು. ಆರೋಗ್ಯ ಇಲಾಖೆಯ ವಿಶ್ವಜಿತ್ ನಾಯಕ್ ಅವರು ಮಾತನಾಡಿ ಒಂದು ದೇಶವನ್ನು ಹಾಳು ಮಾಡಲು ಯುದ್ಧವನ್ನೇ ಮಾಡಬೇಕು ಎಂದೆನಿಲ್ಲ. ಆ ದೇಶದ ಯುವ ಸಮೂಹ ಮಾದಕ ವ್ಯಸನಿಗಳಾದರೆ ಸಾಕು ಆ ದೇಶ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.