ಮಂಡ್ಯ: ‘ಹಾಕಿ ಕ್ಷೇತ್ರದಲ್ಲಿ ಭಾರತ ದೇಶವಲ್ಲದೆ ಇಡೀ ವಿಶ್ವವೇ ತಿರುಗಿ ನೋಡುವಂತೆ ಸಾಧನೆ ಮಾಡಿದ ಮಹಾನ್ ಹಾಕಿ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್’ ಎಂದು ಜಿಲ್ಲಾಧಿಕಾರಿ ಕುಮಾರ ಬಣ್ಣಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೇರಾ ಯುವ ಭಾರತ್ ಸಂಯುಕ್ತಾಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮದಿನದ ಅಂಗವಾಗಿ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡಾ ದಿನದಂದು ಕ್ರೀಡೆಯಲ್ಲಿ ಅಪರೂಪದ ಸಾಧನೆ ಮಾಡಿದವರನ್ನು ಸ್ಮರಿಸುವುದರ ಜತೆಗೆ ಕ್ರೀಡಾ ಮೌಲ್ಯಗಳನ್ನು ಹಾಗೂ ಕ್ರೀಡಾ ಮನೋಭಾವvನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಮ್ಮನ್ನ ನಾವು ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಿಸ್ತು ಹಾಗೂ ನೈತಿಕತೆಯ ಮೌಲ್ಯಗಳನ್ನು ಕಾಣಬಹುದು. ಪ್ರತಿಯೊಂದು ಕ್ರೀಡೆಯು ತನ್ನದೇ ಆದ ಮೆರುಗು ಹಾಗೂ ನಿಯಮಗಳನ್ನು ಹೊಂದಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಕ್ರೀಡಾ ನಿಯಮಗಳನ್ನು ಪಾಲಿಸುವುದರಿಂದ ಆರೋಗ್ಯಕರ ಜೀವನವನ್ನು ನಡೆಸಬಹುದು ಎಂದು ಹೇಳಿದರು.
ಪ್ರಸ್ತುತ ಸಮಾಜದಲ್ಲಿ ಜೀವನದ ಕ್ರಮಗಳು ಅವ್ಯವಸ್ಥೆಯಿಂದ ಕೂಡಿದೆ. ಮನಸೋ ಇಚ್ಛೆ ಆಹಾರ ಸೇವಿಸಿದರೆ ಆರೋಗ್ಯ ಉತ್ತಮವಾಗಿರುವುದಿಲ್ಲ. ಹೀಗಾಗಿ ಜೀವನದ ಕ್ರಮದಲ್ಲಿ ಶಿಸ್ತಿನ ಅವಶ್ಯವಿದೆ. ಬದುಕಿನಲ್ಲಿ ಒಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಆತನ ಶಿಸ್ತು ಮಹತ್ತರ ಪಾತ್ರ ವಹಿಸಿರುತ್ತದೆ. ಬದುಕಿನಲ್ಲಿ ಮತ್ತು ಆಹಾರ ಪದ್ಧತಿಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಎಂದು ಯುವ ಪೀಳಿಗೆಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡಾ ದಿನಾಚರಣೆ ಅಂಗವಾಗಿ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಿ. ಓಂಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಹಾಗೂ ಮುಖ್ಯ ಶಿಕ್ಷಕಿ ಮಂಗಳಾ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಶಿಸ್ತು, ನೈತಿಕ ಮೌಲ್ಯ ಕಾಣಬಹುದು ಕ್ರೀಡಾ ಚಟುವಟಿಕೆಯಿಂದ ಆರೋಗ್ಯಕರ ಜೀವನ ಪ್ರಮಾಣ ವಚನ ಬೋಧಿಸಿದ ಜಿಲ್ಲಾಧಿಕಾರಿ
‘ಕ್ರೀಡಾ ಕ್ಷೇತ್ರದ ಚಿನ್ನದ ಯುಗ’
ಧ್ಯಾನ್ ಚಂದ್ ಅವರು ಕ್ರೀಡಾಪಟುವಾಗಿದ್ದಂತಹ ಸಂದರ್ಭದಲ್ಲಿ ಕ್ರೀಡಾಕ್ಷೇತ್ರವನ್ನು ‘ಚಿನ್ನದ ಯುಗ’ ಎಂದು ಕರೆಯಲಾಗುತಿತ್ತು. ಒಲಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನು ಪಡೆದ ಹಿರಿಮೆಯೂ ಅವರಿಗೆ ಸಲ್ಲುತ್ತದೆ. ಭಾರತವಲ್ಲದೆ ಇತರೆ ದೇಶಗಳು ಸಹ ಅವರ ಸಾಧನೆಯನ್ನು ಗುರುತಿಸುವಂತಹ ಇತಿಹಾಸವನ್ನು ಅವರು ಸೃಷ್ಟಿಸಿದ್ದಾರೆ ಎಂದರು. ದೇಹ ಸದೃಢವಾಗಿದ್ದರೆ ಮನಸ್ಸು ಕೂಡ ಸದೃಢವಾಗಿರುತ್ತದೆ. ಆದ್ದರಿಂದ ಮಾನಸಿಕವಾಗಿ ದೈಹಿಕವಾಗಿ ಹಾಗೂ ಸದೃಢವಾಗಿ ಬದುಕಲು ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.