
ಮಂಡ್ಯ: ‘ಜಿಲ್ಲಾ ಉಸ್ತುವಾರಿ ಸಚಿವರು ಅವರ ಸ್ಥಾನಕ್ಕೆ ಶೋಭೆ ತರುವಂಥ ಮಾತಗಳನ್ನಾಡಲಿ. ಅವರು ರಾಜಕೀಯವಾಗಿ ಬೆಳೆದು ಬಂದ ದಾರಿಯನ್ನು ಮರೆತಿದ್ದಾರೆ. ಆ ದಾರಿಯನ್ನು ಮರೆತಿರುವವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು.
ಮಂಡ್ಯದ ಹನಕೆರೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ನಮಗೂ ನಾಲಿಗೆಯಿದೆ, ಅವರ ತರ ಹರಿಬಿಡುವುದಿಲ್ಲ. ಸಮಯ ಬಂದಾಗ ಜಿಲ್ಲೆಯ ಜನ ಇದಕ್ಕೆ ಉತ್ತರ ಕೊಡ್ತಾರೆ. ಅವರು ಹೇಳಿಕೆ ಕೊಡುವುದಕ್ಕಿಂತ ಮುಂಚೆ ಯೋಚನೆ ಮಾಡಿ ಮಾತನಾಡಲಿ’ ಎಂದು ಹೇಳಿದರು.
‘ಜೆಡಿಎಸ್ ಅನ್ನು ಓಡಿಸುವಂಥ ಶಕ್ತಿ ಇರುವುದು ಜಿಲ್ಲೆಯ ಜನತೆಗೆ. ಯಾರನ್ನು ಜಿಲ್ಲೆಯಲ್ಲಿ ಉಳಿಸಿಕೊಳ್ಳಬೇಕು, ಯಾರನ್ನ ಕಳಿಸಬೇಕು ಎಂದು ಜಿಲ್ಲೆಯ ಜನ ತೀರ್ಮಾನಿಸುತ್ತಾರೆ. ಕಳೆದ ಎರಡೂವರೆ ವರ್ಷದ ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನ ನೋಡಿದ್ದಾರೆ. ಇವತ್ತು ಗಲ್ಲಿ ಗಲ್ಲಿ ಗಲ್ಲಿಯಲ್ಲಿ ರಾಜ್ಯ ಸರ್ಕಾರವನ್ನು ಬಾಯಿಗೆ ಬಂದಂಗೆ ಬೈತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
ಹನಕೆರೆ, ಬೂದನೂರು, ಕೊಮ್ಮೇರಹಳ್ಳಿಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಅದ್ದೂರಿ ಸ್ವಾಗತ ಕೋರಿದರು. ಕಾರ್ಯಕರ್ತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡರು.
ಮಂಡ್ಯದ ಹನಕರೆ ಬಳಿ ಟ್ರ್ಯಾಕ್ಟರ್‌ಗಳ ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿ, ಹಾರ ಹಾಕಿ ನಿಖಿಲ್ ಕುಮಾರಸ್ವಾಮಿ ಅವರನ್ನ ಜೆಡಿಎಸ್ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಪ್ರಮುಖ ಮುಖಂಡರು ಅದ್ದೂರಿಯಾಗಿ ಸ್ಚಾಗತ ಕೋರಿದರು.
ತಾಲ್ಲೂಕಿನ ಕೆರೆಗೋಡು ಹೋಬಳಿಯ ಹುಲಿವಾನ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಲಭೈರವೇಶ್ವರಸ್ವಾಮಿ ಮಹಾದ್ವಾರ ಹಿರಿದೇವಮ್ಮ ಅಚ್ಚಾಳಮ್ಮ ಮತ್ತು ಅಟ್ಟಿಲಕ್ಕಮ್ಮನವರ ದೇವಸ್ಥಾನ ಲೋಕಾರ್ಪಣೆ ಸಮಾರಂಭಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ನಂತರ ಕೇಕ್ ಕಟ್ ಮಾಡಿ ಕಾರ್ಯಕರ್ತರು ಹಾಗೂ ಮುಖಂಡರು ಜನ್ಮದಿನದ ಶುಭಕೋರಿದರು. ಕಾರ್ಯಕ್ರಮದಲ್ಲಿ ಕದಂಬ ಜಂಗಮಮಠದ ಸಿದ್ದಲಿಂಗ ಸ್ವಾಮೀಜಿ ರೇಣುಕಾ ಶಿವಚಾರ್ಯಸ್ವಾಮಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ರಮೇಶ್ ಮನ್‌ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು ಮಾಜಿ ಶಾಸಕ ಜಿ.ಬಿ. ಶಿವಕುಮಾರ್. ಮುಖಂಡರಾದ ಕೆ.ಎಸ್. ವಿಜಯ್ ಆನಂದ್ ದೇವಸ್ಥಾನ ಕಾರ್ಯಕಾರಿ ಮಂಡಳಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.