ನಾಗಮಂಗಲ: ತಾಲ್ಲೂಕಿನ ಐತಿಹಾಸಿಕ ಜಾತ್ರೆಯಾಗಿರುವ ಆದಿಚುಂಚನಗಿರಿ ಜಾತ್ರೆಗೆ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಧರ್ಮಧ್ವಜಾರೋಹಣ ಮತ್ತು ನಾಂದಿ ಪೂಜೆಗಳನ್ನು ನೆರವೇರಿಸುವ ಮೂಲಕ ಶುಕ್ರವಾರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ 9 ದಿನಗಳು ಜರುಗುವ ಜಾತ್ರೆಯ ಮೊದಲನೇ ದಿನದ ಅಂಗವಾಗಿ ಶುಕ್ರವಾರ ಬೆಳಿಗ್ಗೆಯಿಂದಲೇ ಗಂಗಾಧರೇಶ್ವರ ಸ್ವಾಮಿ, ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಲಯಗಳು ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಅವರ ಗದ್ದುಗೆ ಸೇರಿದಂತೆ ಕ್ಷೇತ್ರದ ಎಲ್ಲಾ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಅಲ್ಲದೇ ಬೆಳಿಗ್ಗೆ ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಸಭಾ ಕರ್ಯಕ್ರಮದ ಸಾನ್ನಿಧ್ಯ ವಹಿಸಿ ಭಕ್ತರಿಗೆ ಆಶೀರ್ವಚನ ನೀಡಿದರು. ಜಾತ್ರೆಯ ಅಂಗವಾಗಿ ದೇವಾಲಯಗಳನ್ನು ಮತ್ತು ಕ್ಷೇತ್ರದ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ರು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಪೂಜಾ ಕಾರ್ಯಕ್ರಮಗಳಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರೊಂದಿಗೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಭಾಗವಹಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಬಿ.ಜಿ.ಎಸ್ ಕ್ರೀಡೋತ್ಸವ ಉದ್ಘಾಟಿಸಿದ ಸ್ವಾಮೀಜಿ
ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಜರುಗುವ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಮಠದ ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಬಿ.ಜಿ.ಎಸ್ ಕ್ರೀಡೋತ್ಸವದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಕ್ರೀಡಾಪಟುಗಳು ಮತ್ತು ಭಕ್ತರಿಗೆ ಆಶೀರ್ವಚನ ನೀಡಿದರು. ರಾಜ್ಯ ವಿವಿಧ ಭಾಗಗಳಿಂದ ಸಾವಿರಾರು ಕ್ರೀಡಾಪಟುಗಳು ಇದ್ದರು. ಕಾರ್ಯಕ್ರಮದಲ್ಲಿ ಡಿಐಜಿ ಪಿ. ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ರಾಷ್ಟ್ರೀಯ ವಾಲಿಬಾಲ್ ಕೆ.ಎಂ.ಹನಿ, ರಾಷ್ಟ್ರಮಟ್ಟದ ಕಬ್ಬಡ್ಡಿ ತರಬೇತುದಾರ ಬಿ.ಸಿ.ರಮೇಶ್ ಇದ್ದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ಶಾಖಾ ಮಠದ ಸ್ವಾಮೀಜಿ ಮತ್ತು ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.