ADVERTISEMENT

ಮಂಡ್ಯದಲ್ಲಿ ಜಿದ್ದಾಜಿದ್ದಿ ಪ್ರಚಾರಕ್ಕೆ ತೆರೆ

ಕೊನೆ ದಿನ ಸುಮಲತಾ ಅಂಬರೀಷ್‌ರಿಂದ ಸ್ವಾಭಿಮಾನ ಸಮಾವೇಶ, ಮುಖ್ಯಮಂತ್ರಿ ಭಾರಿ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 20:24 IST
Last Updated 16 ಏಪ್ರಿಲ್ 2019, 20:24 IST
1. ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ನಡೆದ ಸ್ವಾಭಿಮಾನದ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಸೆರಗೊಡ್ಡಿ ಮತಭಿಕ್ಷೆ ಬೇಡಿದರು 2.ಪ್ರಚಾರದ ಕೊನೆಯ ದಿನವಾದ ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಸರಾಳು ಪಟ್ಟಣದಲ್ಲಿ ರೋಡ್‌ ಷೋ ನಡೆಸಿದರು
1. ಮಂಡ್ಯದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ನಡೆದ ಸ್ವಾಭಿಮಾನದ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಸೆರಗೊಡ್ಡಿ ಮತಭಿಕ್ಷೆ ಬೇಡಿದರು 2.ಪ್ರಚಾರದ ಕೊನೆಯ ದಿನವಾದ ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಸರಾಳು ಪಟ್ಟಣದಲ್ಲಿ ರೋಡ್‌ ಷೋ ನಡೆಸಿದರು   

ಮಂಡ್ಯ: ಕುತೂಹಲದ ಕಣವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕೆ.ನಿಖಿಲ್‌ ಪರ ರೋಡ್‌ ಷೋ ನಡೆಸಿದರೆ, ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಸ್ವಾಭಿಮಾನದ ಸಮಾವೇಶ ನಡೆಸಿದರು.

ಶ್ರೀರಂಗಪಟ್ಟಣ ಕ್ಷೇತ್ರದ ತಗ್ಗಹಳ್ಳಿಯಿಂದ ಮುಖ್ಯಮಂತ್ರಿ ಪ್ರಚಾರ ಆರಂಭಿಸಿದರು. ‘ನಿಖಿಲ್‌ನನ್ನು ಸೋಲಿಸಿ ಕೆಲವರು ನನ್ನನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಲು ಕುತಂತ್ರ ಮಾಡಿದ್ದಾರೆ. ಆರೋಗ್ಯ ಸಮಸ್ಯೆ ಇದ್ದರೂ ನಿಮ್ಮ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ಪಕ್ಷೇತರ ಅಭ್ಯರ್ಥಿ ಅಭಿಮಾನ, ಅನುಕಂಪ, ಆಕರ್ಷಣೆ ಮೂಲಕ ಮತ ಕೇಳುತ್ತಿದ್ದಾರೆ. ಆದರೆ, ನಾನು ರೈತರ ಕಷ್ಟಗಳಿಗೆ ಸ್ಪಂದಿಸುತ್ತಾ ಮತಯಾಚನೆ ಮಾಡುತ್ತಿದ್ದೇನೆ. ಕಾವೇರಿ ನೀರಿನ ವಿಚಾರದಲ್ಲಿ ಹೋರಾಟ ಮಾಡಿದ್ದು, ರೈತರು ಎರಡು ಬೆಳೆ ಬೆಳೆದುಕೊಳ್ಳಲು ನೀರು ಹರಿಸಲಾಗುತ್ತಿದೆ. ಸಮಸ್ಯೆಗಳಿಗೆ ಸಂದಿಸುವವರನ್ನು ಆಯ್ಕೆ ಮಾಡಿ’ ಎಂದು ಮನವಿ ಮಾಡಿದರು.

ಮಾಧುಸ್ವಾಮಿ ಹುಚ್ಚ: ‘ಬಿಜೆಪಿ ಶಾಸಕ ಮಾಧುಸ್ವಾಮಿ ಒಬ್ಬ ಹುಚ್ಚ. ಆತ ಎಚ್‌.ಡಿ.ದೇವೇಗೌಡ ಹಾಗೂ ನನ್ನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾನೆ. ಅವನ ಹೇಳಿಕೆಗೆ ವಿಧಾನಸಭೆಯಲ್ಲಿ ತಕ್ಕ ಉತ್ತರ ನೀಡುತ್ತೇನೆ’ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು.

ADVERTISEMENT

‘ಚಲನಚಿತ್ರ ನಟರಿಂದ ಯಾವುದೇ ಉಪಯೋಗವಿಲ್ಲ. ಅವರು ಬಂದು ಹೋದರೆ ಯಾವ ಬದಲಾವಣೆಯೂ ಆಗುವುದಿಲ್ಲ. ಪರದೆ ಮೇಲೆ ನಡೆಯುವುದೇ ಬೇರೆ, ವಾಸ್ತವವಾಗಿ ನಡೆಯುವುದೇ ಬೇರೆ. ಕುತಂತ್ರ ರಾಜಕಾರಣ ಮಾಡಿ ಸರ್ಕಾರ ತೆಗೆಯಲು ಹೊರಟವರಿಗೆ ತಕ್ಕ ಪಾಠ ಕಲಿಸಬೇಕು. ಅಧಿಕ ಮತಗಳಿಂದ ನಿಖಿಲ್‌ ಗೆಲ್ಲಿಸಿ ಕುತಂತ್ರಿಗಳಿಗೆ ಉತ್ತರ ನೀಡಬೇಕು’ ಎಂದರು.

ಸ್ವಾಭಿಮಾನಿ ಸಮಾವೇಶ
ನಗರದ ಸಿಲ್ವರ್‌ ಜ್ಯೂಬಿಲಿ ಉದ್ಯಾನದಲ್ಲಿ ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಸ್ವಾಭಿಮಾನದ ಸಮಾವೇಶ ನಡೆಸಿದರು. ಮುಖ್ಯಮಂತ್ರಿ ಆರೋಪಗಳಿಗೆ ಉತ್ತರ ನೀಡಿದರು. ‘ನನ್ನ ಮುಖದ ಮೇಲೆ ನೋವಿನ ಛಾಯೆ ಇಲ್ಲ ಎಂದು ಹೇಳುತ್ತೀರಿ. ಡ್ರಾಮಾ ಮಾಡುತ್ತಿದ್ದಾರೆ ಎಂದು ಕೀಳಾಗಿ ಮಾತನಾಡುತ್ತೀರಿ. ಗಂಡನನ್ನು ಕಳೆದುಕೊಂಡ ಪತ್ನಿಯ ನೋವು ನಾಟಕವೇ’ ಎಂದು ಪ್ರಶ್ನಿಸಿದರು.

ಒಂದು ಹೆಣ್ಣಿಗೆ ಭಯವೇ
‘ನಿಮ್ಮ ಪರವಾಗಿ ಮಾಜಿ ಪ್ರಧಾನಿ, ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು ಇದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿಮ್ಮ ಪರ ಪ್ರಚಾರ ಮಾಡಿದ್ದಾರೆ. ತಂತ್ರ, ಕುತಂತ್ರ ಮಾಡುತ್ತಿದ್ದೀರಿ. ಒಂದು ಹೆಣ್ಣಿಗೆ ಇಷ್ಟೊಂದು ಭಯವೇಕೆ. ಹೆಣ್ಣಿನ ಮೇಲೆ ಗೌರವ ಇಲ್ಲ. ಸೈನಿಕ, ರೈತರ ಮೇಲೆ ಕಾಳಜಿ ಇಲ್ಲ. ಬರೀ ಕುಟುಂಬಕ್ಕಾಗಿ ಮಾನ, ಮರ್ಯಾದೆ ಬಿಟ್ಟು ದ್ವೇಷ, ಜಾತಿ ರಾಜಕಾರಣ ಮಾಡುತ್ತೀರಿ’ ಎಂದು ವಾಗ್ದಾಳಿ ಮಾಡಿದರು.

ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಮೈತ್ರಿ ಅಭ್ಯರ್ಥಿಗೆ ಮತ ಹಾಕಿದರೆ ಅಂಬರೀಷ್‌ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುತ್ತೀರಿ. ಹಲವು ಚುನಾವಣೆಗಳಲ್ಲಿ ಅಂಬರೀಷ್‌ ವಿರುದ್ಧ ಕೆಲಸ ಮಾಡಿದ್ದ ನಿಮಗೆ ಹಾಗೆ ಹೇಳಲು ಏನು ಹಕ್ಕಿದೆ’ ಎಂದು ಪ್ರಶ್ನಿಸಿದರು.

ಕೊನೆಗೆ ಸೆರಗೊಡ್ಡಿ ಮತಭಿಕ್ಷೆ ಕೇಳಿದರು. ಮಂಡ್ಯ ಸೊಸೆಗೆ ಒಂದು ಅವಕಾಶ ಕೊಡಿ ಎಂದು ಬೇಡಿದರು. ಉರ್ದು ಭಾಷೆಯಲ್ಲಿ ಮತಯಾಚನೆ ಮಾಡಿ ಮುಸ್ಲಿಮರ ಗಮನ ಸೆಳೆದರು.

ಕಣ್ಣೀರಿಟ್ಟ ಸುಮಲತಾ
‘ಅಂಬರೀಷ್‌ ಮೃತಪಟ್ಟಾಗ ನಾನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆಸ್ಪತ್ರೆಯಲ್ಲಿದ್ದ ನನ್ನ ಮಗ, ಮಂಡ್ಯಕ್ಕೆ ಮೃತದೇಹ ಕೊಂಡೊಯ್ಯಬೇಕು ಎಂದಾಗ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ. ಬೇಡ ಎಂದೇ ಮುಖ್ಯಮಂತ್ರಿ ಹೇಳಿದ್ದರು. ಮಂಡ್ಯದಿಂದ 600 ಬಸ್‌ ಕಳುಹಿಸುವುದಾಗಿ ತಿಳಿಸಿದ್ದರು. ಆದರೆ, ಮಂಡ್ಯದಿಂದ ಬಂದಿದ್ದ ಜನರು, ಬಸ್‌ ಕಳಿಸೋಕೆ ನೀವ್ಯಾರು ಎಂದು ಪ್ರಶ್ನಿಸಿದರು. ಜನರ ಒತ್ತಾಯಕ್ಕೆ ಮಣಿದು ಮೃತದೇಹ ತರಲಾಯಿತು’ ಎಂದರು.

‘ಅವರಿಗೆ ಗೌರವ ಕೊಟ್ಟಿದ್ದೀರಿ ನಿಜ, ಅದಕ್ಕೆ ಕೃತಜ್ಞತೆ ಇದೆ. ಆದರೆ, ಮೃತದೇಹ ತಂದ ವಿಚಾರವನ್ನು ಎಷ್ಟು ಬಾರಿ ಹೇಳುತ್ತೀರಿ. ಲಾಭಕ್ಕಾಗಿ ಅಂತ್ಯಕ್ರಿಯೆ ರಾಜಕಾರಣ ಏಕೆ ಮಾಡುತ್ತೀರಿ. ಹಾಗಿದ್ದರೆ ಅಂಬರೀಷ್‌ ಶೂನ್ಯವಾಗಿದ್ದರೇ, ಅವರಿಗೆ ಆ ಅರ್ಹತೆ ಇರಲಿಲ್ಲವೇ. ಅವರು ರಾಜಕಾರಣಿ ಆಗುವುದಕ್ಕೂ ಮೊದಲೇ ಮಂಡ್ಯದ ಗಂಡು ಆಗಿದ್ದರು’ ಎನ್ನುತ್ತಾ ಕಣ್ಣೀರು ಹಾಕಿದರು.

ಕಣ್ಣೀರಿಟ್ಟು ಆಣೆ ಮಾಡಿದ ಅಭಿಷೇಕ್‌
ಅಂಬರೀಷ್‌ ಪುತ್ರ ಅಭಿಷೇಕ್‌ ಗೌಡ ಮಾತನಾಡಿ, ‘ಮಂಡ್ಯಕ್ಕೆ ಅಪ್ಪನ ಮೃತದೇಹ ಕೊಂಡೊಯ್ಯದಿದ್ದರೆ ತಪ್ಪಾಗುತ್ತದೆ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದೆ. ನಿನ್ನ ಆಸೆ ಈಡೇರಿಸುವುದು ಕಷ್ಟ ಎಂದರು. ಆದರೆ ಮಂಡ್ಯದಿಂದ ಬಂದಿದ್ದ ಜನರು ಮೃತದೇಹ ತರಲಿಲ್ಲ ಎಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. ಜನರ ಒತ್ತಾಯದ ಮೇರೆಗೆ ದೇಹ ತರಲಾಯಿತು. ನನ್ನ ತಂದೆ ಮೇಲಾಣೆ, ಇದು ಸತ್ಯ’ ಎಂದರು.

‘ನನ್ನ ತಾಯಿಗೆ ನೋವು ಇಲ್ಲ ಎನ್ನುವುದು ಸರೀನಾ. ತಂದೆ, ತಾಯಿ ವಿರುದ್ಧ ಮಾತನಾಡಿದಾಗ ಸಹಿಸುವುದು ಹೇಗೆ’ ಎನ್ನುತ್ತಾ ಕಣ್ಣೀರಿಟ್ಟರು. ‘ಒಳ್ಳೆಯ ಉದ್ದೇಶದಿಂದ ನನ್ನ ತಾಯಿ ಸ್ಪರ್ಧೆ ಮಾಡಿದ್ದಾರೆ. ನಿಮ್ಮ ಹೃದಯದಲ್ಲಿ ಜಾಗ ಕೊಡಿ. ನಮ್ಮ ಅಪ್ಪ ನನಗೆ ಗೌಡ ಎಂದು ಹೆಸರಿಟ್ಟಿದ್ದಾರೆ. ನನಗೂ ಇಲ್ಲಿ ಸ್ಥಾನ ಇದೆ’ ಎಂದು ಹೇಳಿದರು.

‘ಮಂಜುನಾಥನ ಆಣೆಗೂ ಕಳ್ಳರ ಪಕ್ಷ ಎಂದಿಲ್ಲ’
ಯಶ್‌ ಮಾತನಾಡಿ ‘ನಮ್ಮ ಮನೆಯ ಹೆಣ್ಣಿನ ಬಗ್ಗೆ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಅವರು ಎಷ್ಟೇ ದೊಡ್ಡವರಾಗಿದ್ದರೂ, ಎಂಥದೇ ಸ್ಥಾನದಲ್ಲಿದ್ದರೂ ವಿರೋಧಿಸುತ್ತೇವೆ. ಧರ್ಮಸ್ಥಳ ಮಂಜುನಾಥನ ಆಣೆಗೂ ಜೆಡಿಎಸ್‌ ಪಕ್ಷವನ್ನು ಕಳ್ಳರ ಪಕ್ಷ ಎಂದಿಲ್ಲ’ ಎಂದರು.

ದರ್ಶನ್‌ ಮಾತನಾಡಿ ‘ನಾನು ರೈತನೇ ಎಂದು ಕೇಳಿದ್ದಾರೆ. ಪರೀಕ್ಷೆಗೆ ಬಂದರೆ ಸಿದ್ಧನಿದ್ದೇನೆ. ಅಂಬರೀಷ್‌ ಬದುಕಿದ್ದಾಗ ಅವರ ಸುಖದಲ್ಲಿ ಭಾಗಿಯಾಗಿದ್ದೆವು. ಈಗ ಸುಮಲತಾ ಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೂ ಭಾಗಿಯಾಗುವುದು ನಮ್ಮ ಕರ್ತವ್ಯ’ ಎಂದು ಹೇಳಿದರು.

ಚಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ ಗುಪ್ತ ಚರ್ಚೆ
ಶ್ರೀರಂಗಪಟ್ಟಣ: ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡಲು ನಿರಾಕರಿಸಿ ಪ್ರಸಕ್ತ ಲೋಕಸಭಾ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿರುವ ಕಾಂಗ್ರೆಸ್ ಮುಖಂಡರಾದ ಎನ್.ಚಲುವರಾಯಸ್ವಾಮಿ, ರಮೇಶ ಬಂಡಿಸಿದ್ದೇಗೌಡ ಮಂಗಳವಾರ ಪಟ್ಟಣದಲ್ಲಿ ಚರ್ಚೆ ನಡೆಸಿದರು.

ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ವಾಭಿಮಾನಿ ಸಮಾವೇಶ ನಡೆಸುತ್ತಿದ್ದ ಸಮಯದಲ್ಲೇ ಇಲ್ಲಿನ ಹೋಟೆಲ್‌ನಲ್ಲಿ ಇಬ್ಬರು ಅರ್ಧ ಗಂಟೆ ಚರ್ಚೆ ನಡೆಸಿದ್ದು ಮಹತ್ವ ಪಡೆದುಕೊಂಡಿದೆ. ಸುಮಲತಾಗೆ ಪರೋಕ್ಷ ಬೆಂಬಲ ನೀಡಿದ್ದು, ಮಂಡ್ಯದ ಸ್ವಾಭಿಮಾನಿ ಸಮಾವೇಶದ ಯಶಸ್ಸಿನ ಬಗ್ಗೆ ಈ ಇಬ್ಬರೂ ಮುಖಂಡರು ತಮ್ಮ ಆಪ್ತರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.