
ಪಾಂಡವಪುರ: ರೈತರು ಮತ್ತು ಜನರು ತಮ್ಮ ಸಮಸ್ಯೆಗಳಿಗಾಗಿ ತಾಲ್ಲೂಕು ಕೇಂದ್ರದ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪಂಚಾಯಿತಿ ಮಟ್ಟದಲ್ಲಿ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಿಕೊಡಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿಯಲ್ಲಿ ಆಯೋಜಿಸಿದ್ದ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಈಚೆಗೆ ಮಾತನಾಡಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಪಂಚಾಯಿತಿ ಮಟ್ಟದ ವ್ಯಾಪ್ತಿಯ ಎಲ್ಲ ಗ್ರಾಮಗಳ ಜನರ ಸಮಸ್ಯೆಗಳನ್ನು ಎಲ್ಲ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಬಗೆಹರಿಸಿ ಜನರು ಕಚೇರಿ ಅಲೆಯುವುದನ್ನು ತಪ್ಪಿಸಬೇಕಿದೆ. ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ, ಕಂದಾಯ, ತಾಲ್ಲೂಕು ಪಂಚಾಯಿತಿ, ಸರ್ವೇ, ಕೃಷಿ, ಆರೋಗ್ಯ, ಶಿಕ್ಷಣ, ತೋಟಗಾರಿಕೆ, ರೇಷ್ಮೆ ಸೇರಿದಂತೆ ಎಲ್ಲ ಇಲಾಖೆಯಲ್ಲಿರುವ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಕೊಡಲಾಗುತ್ತಿದೆ’ ಎಂದರು.
ಸರ್ಕಾರಿ ಸೇವೆ ಮನೆಬಾಗಿಲಿಗೆ ಕಾರ್ಯಕ್ರಮದಲ್ಲಿ 1,732 ಅರ್ಜಿಗಳು ಸ್ವೀಕೃತಗೊಂಡಿದ್ದು, ಈ ಪೈಕಿ 954 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ. ಉಳಿದ 778 ಅರ್ಜಿಗಳನ್ನು ಶೀಘ್ರದಲ್ಲಿಯೇ ವಿಲೇವಾರಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ, ತಾಲ್ಲೂಕು ಪಂಚಾಯಿತಿ ಇಒ ಎಂ.ಎಸ್.ವೀಣಾ ಕಾರ್ಯಕ್ರಮಕ್ಕೆ ಗೈರಾಗಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ತಪ್ಪಿದ ಬಾಲ್ಯವಿವಾಹ: ‘ದೊಡ್ಡಬ್ಯಾಡರಹಳ್ಳಿ ಪಂಚಾಯಿತಿಯಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟುವ ಕ್ರಮವಹಿಸಲಾಗಿದೆ. ಜನರು ಬಾಲ್ಯ ವಿವಾಹವನ್ನು ಬೆಂಬಲಿಸಬಾರದು’ ಎಂದು ಸಿಡಿಪಿಒ ಪೂರ್ಣಿಮಾ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ್, ಉಪಾಧ್ಯಕ್ಷೆ ಶಕುಂತಲಾ, ಶಿರಸ್ತೇದಾರ್ ಕಮಲಮ್ಮ, ಪಿಡಿಒ ಪುರುಷೋತ್ತಮ, ಕಾರ್ಯದರ್ಶಿ ಮಹದೇವು, ಆರ್‌ಐ ಪ್ರಕಾಶ್, ತಾಲ್ಲೂಕು ಸರ್ವೇಯರ್ ಭಾಸ್ಕರ್, ಟಿಎಚ್‌ಒ ಸಿ.ಎ.ಅರವಿಂದ್, ವೈದ್ಯಾಧಿಕಾರಿ ಡಾ.ದೀಪಿಕಾ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಿವಣ್ಣ, ಆನಂದ್, ಸದಸ್ಯರಾದ ನಿಂಗರಾಜು, ಮಂಗಳಮ್ಮ, ಶಿವಲಿಂಗು, ಮಂಜುಳಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.