ಮೈಸೂರು/ಮಂಡ್ಯ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು ಪ್ರಾಂತ್ಯದ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾತಿ, ನುಗು, ತಾರಕ ಅಣೆಕಟ್ಟೆಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ಕಟ್ಟೆಚ್ಚರ ವಹಿಸಿದೆ.
‘ಕೆಆರ್‌ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರ, ಉತ್ತರ ದ್ವಾರ, ಬೃಂದಾವನ ಪ್ರವೇಶ ದ್ವಾರ ಮತ್ತು ಆರ್ಕಿಡ್ ಹೋಟೆಲ್ ಪ‍್ರವೇಶ ಮಾರ್ಗದಲ್ಲಿ ಸಂಚರಿಸುವವರ ಮೇಲೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಸ್) ಹದ್ದಿನ ಕಣ್ಣಿಟ್ಟಿದೆ. ಈ ಮಾರ್ಗಗಳಲ್ಲಿ ಬರುವ ಮತ್ತು ಹೋಗುವವರನ್ನು ತಪಾಸಣೆಗೆ ಒಳಡಿಸಲಾಗುತ್ತಿದೆ. ಅಣೆಕಟ್ಟೆಯ ಸರಹದ್ದಿನಲ್ಲಿ, ಜನ ಸಂಚಾರ ಹೆಚ್ಚು ಇರುವ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಿನದ 24 ಗಂಟೆಯೂ ಪೊಲೀಸರು ಕಾವಲು ಕಾಯುತ್ತಿದ್ದಾರೆ’ ಎಂದು ಕೈಗಾರಿಕಾ ಭದ್ರತಾ ಪಡೆಯ ಸಹಾಯಕ ಕಮಾಂಡೆಂಟ್ ಪ್ರಮೋದ್ ತಿಳಿಸಿದ್ದಾರೆ.
‘ಅಣೆಕಟ್ಟೆಯ ಭದ್ರತೆಗೆ ಒಬ್ಬರು ಸಹಾಯಕ ಕಮಾಂಡೆಂಟ್, ಮೂವರು ಇನ್ಸ್‌ಪೆಕ್ಟರ್‌ಗಳು ಸೇರಿ 56 ಮಂದಿ ಇದ್ದು, ಮೂರು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಯ ರಜೆಯನ್ನು ಸದ್ಯ ಕಡಿತಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ಓಡಾಡುವವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.