ADVERTISEMENT

ಶ್ರೀರಂಗಪಟ್ಟಣ | ಸೂರು ಇಲ್ಲದೆ ಹಕ್ಕಿಪಿಕ್ಕಿ ಜನರ ಪರದಾಟ

ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ಬೀಡುಬಿಟ್ಟಿರುವ ಅಲೆಮಾರಿಗಳು

ಗಣಂಗೂರು ನಂಜೇಗೌಡ
Published 19 ಮೇ 2020, 20:00 IST
Last Updated 19 ಮೇ 2020, 20:00 IST
ಗಾಮನಹಳ್ಳಿ ಬಳಿ ಬೀಡುಬಿಟ್ಟಿರುವ ಅಲೆಮಾರಿ ಹಕ್ಕಿಪಿಕ್ಕಿ ಜನರು
ಗಾಮನಹಳ್ಳಿ ಬಳಿ ಬೀಡುಬಿಟ್ಟಿರುವ ಅಲೆಮಾರಿ ಹಕ್ಕಿಪಿಕ್ಕಿ ಜನರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಗಾಮನಹಳ್ಳಿ ಬಳಿ ಕಳೆದ 5 ವರ್ಷಗಳಿಂದ ಬೀಡುಬಿಟ್ಟಿರುವ ಅಲೆಮಾರಿ ಹಕ್ಕಿಪಿಕ್ಕಿ ಜನರು ಸುಸಜ್ಜಿತ ಸೂರು ಇಲ್ಲದೆ ಪ್ರತಿ ದಿನ ಆತಂಕದಲ್ಲೇ ದಿನ ದೂಡುತ್ತಿದ್ದಾರೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಉಳಿದುಕೊಂಡಿರುವ ಈ ಜನರ ಜೋಪಡಿಗಳು ಗಾಳಿಗೆ ಹಾರಿ ಹೋಗುವಂತಿವೆ. ಮಳೆಗಾಲ ಆರಂಭವಾಗಿರುವುದರಿಂದ ಇವರಲ್ಲಿ ಆತಂಕ ಹೆಚ್ಚಾಗಿದೆ. ಹಳೆಯ ಸೀರೆ, ತೆಂಗಿನ ಗರಿ, ಸಿಮೆಂಟ್‌ ಚೀಲಗಳಿಂದ ನಿರ್ಮಿಸಿಕೊಂಡಿರುವ ಇವರ ಗುಡಿಸಲುಗಳಿಗೆ ವಿದ್ಯುತ್‌ ಸಂಪರ್ಕ ಕೂಡ ಇಲ್ಲ.

ಸಂಜೆಯಾದರೆ ಜೋಪಡಿಗಳಿಂದ ಈಚೆ ಬರಲು ಮಕ್ಕಳು ಹೆದರುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಹಾವು, ಹಲ್ಲಿಗಳು ಜೋ‍ಪಡಿಗಳಿಗೆ ನುಗ್ಗುತ್ತವೆ.

ADVERTISEMENT

ಹಕ್ಕಿಪಿಕ್ಕಿ ಜನರ 11 ಕುಟುಂಬಗಳಲ್ಲಿ 120ಕ್ಕೂ ಹೆಚ್ಚು ಜನರಿದ್ದಾರೆ. ಈ ಕುಟುಂಗಳಿಗೆ ನಿವೇಶನ ಹಂಚಲೆಂದೇ 7 ಗುಂಟೆ ಸರ್ಕಾರಿ ಜಾಗವನ್ನು ತಾಲ್ಲೂಕು ಆಡಳಿತ ಮೀಸಲಿರಿಸಿದೆ. ಇದಾಗಿ ಎರಡು ವರ್ಷ ಕಳೆದರೂ ನಿವೇಶನ ಹಂಚಿಕೆ ಪ್ರಕ್ರಿಯೆ ಮಾತ್ರ ನಡೆದಿಲ್ಲ. ಬೆಚ್ಚಗೆ ಸೂರು ಕಟ್ಟಿಕೊಂಡು ಇತರರಂತೆ ನೆಮ್ಮದಿಯಾಗಿ ಬದುಕಬೇಕು ಎಂಬ ಈ ಅಲೆಮಾರಿ ಜನರ ಕನಸು ಈಡೇರಿಲ್ಲ; ಜೀವ ಕೈಯಲ್ಲಿಡಿದು ಬದುಕುವ ಬವಣೆ ತೀರಿಲ್ಲ.

‘ಈಚೆಗೆ ಮಳೆ, ಗಾಳಿ, ಸಿಡಿಲಿನ ಆರ್ಭಟಕ್ಕೆ ಹೆದರಿದ ಹಕ್ಕಿಪಿಕ್ಕಿ ಜನರು ಜೋಪಡಿಯಿಂದ ಓಡಿ ಬಂದು ಅವರಿವರ ಮನೆಗಳ ಪಡಸಾಲೆಗಳಲ್ಲಿ ರಾತ್ರಿ ಕಳೆದಿದ್ದಾರೆ. ಸರ್ಕಾರ ಇವರಿಗೆ ಪಡಿತರ ಚೀಟಿ, ಮತದಾರರ ಕಾರ್ಡ್‌, ಆಧಾರ್‌ ಕಾರ್ಡ್‌ ಕೊಟ್ಟಿದೆ. ಆದರೆ ಮಳೆ, ಗಾಳಿ, ಬಿಸಿಲಿನಿಂದ ರಕ್ಷಣೆ ಪಡೆಯಲು ಮನೆ ಕಟ್ಟಿಕೊಟ್ಟರೆ ಒಳಿತಾಗುತ್ತದೆ’ ಎಂಬುದು ಊರಿನ ಮುಖಂಡ ದೇವರಾಜು ಅವರ
ಕಳಕಳಿ.

‘ಐದಾರು ವರ್ಷ ಆತು ನಾವು ಇಲ್ಲೀಗ್‌ ಬಂದು. ಮಿನಿಷ್ಟ್ರು ಸಹ ಬಂದಿದ್ರು. ಮನೆ ಕಟ್ಟಿಸಿ ಕೊಡ್ತೀನಿ ಅಂದ್ರು. ಏನೂ ಮಾಡ್ಲಿಲ್ಲ. ಕೂದಲು, ಬಟ್ಟೆ, ಪಿನ್ನು ಮಾರಾಟ ಮಾಡಿ, ಸಿಕ್ಕ ಕಡೆ ಕೂಲಿ ಮಾಡಿ ಬದುಕ್ತಾ ಇದ್ದೇವೆ. ಹಳ್ಳ ದಿಣ್ಣೆ ಅಂತ ಅಲ್ದು ಅಲ್ದು ವಯಸ್ಸೇ ಆಯ್ತು. ನಮ್ ಮಕ್ಕಳಿಗಾದ್ರು ಒಂದ್ ಸೂರು ಅಂತ ಮಾಡ್ಕೊಡಿ’ ಎಂದು ಹಕ್ಕಿಪಿಕ್ಕಿ ಜನರ ಗುಂಪಿನ ಹಿರಿಯ ಸುಬ್ರಮಣಿ ಅಂಗಲಾಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.