ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಕೆಆರ್‌ಎಸ್ ಬೃಂದಾವನದ ಪ್ರವೇಶ ಶುಲ್ಕ ಮತ್ತು ವಾಹನ ಪಾರ್ಕಿಂಗ್ ಶುಲ್ಕ ಹೆಚ್ಚಳ ಹಾಗೂ ಅಣೆಕಟ್ಟೆ ಕೆಳಗಿನ ಕಾವೇರಿ ನದಿ ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬೃಂದಾವನದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿ ಕಾವೇರಿ ನೀರಾವರಿ ನಿಗಮದ ವಿರುದ್ಧ ಘೋಷಣೆ ಕೂಗಿದರು.
‘ಪ್ರವಾಸಿಗರಿಂದ ಮಿತಿ ಮೀರಿದ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಇದು ಹೊರೆಯಾಗಿದೆ. ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಲಿಸಿಲ್ಲ. ಸಿಸಿಟಿವಿ ಕ್ಯಾಮೆರಾ, ಮೆಟಲ್ ಡಿಟೆಕ್ಟರ್ ಹಾಕಿಲ್ಲ. ಬ್ಯಾಗ್‌ಗಳನ್ನು ಸ್ಕ್ಯಾನ್ ಮಾಡುತ್ತಿಲ್ಲ. ಭದ್ರತೆ ಕೂಡ ಸರಿಯಾಗಿಲ್ಲ. ಮೂಲ ಸೌಕರ್ಯ ಕಲ್ಪಿಸುವವರೆಗೆ ಪ್ರವೇಶ ಶುಲ್ಕ ಹೆಚ್ಚಳ ಮಾಡಬಾರದು’ ಎಂದು ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಸಿದರು.
‘ಕೆಆರ್‌ಎಸ್ ಅಣೆಕಟ್ಟೆ ಕೆಳಗಿನ ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸಬೇಕು ಎಂದು ಈ ಹಿಂದೆಯೇ ತಿಳಿಸಲಾಗಿದೆ. ಆದರೂ ಟೋಲ್ ಸಂಗ್ರಹಿಸಲಾಗುತ್ತಿದೆ. ಬೃಂದಾವನಕ್ಕೆ ಈ ಮೊದಲು ಇದ್ದಂತೆ ₹50 ಪ್ರವೇಶ ಶುಲ್ಕ ಮಾತ್ರ ಪಡೆಯಬೇಕು’ ಎಂದು ಅವರು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ ಮಾತನಾಡಿ, ‘ಕೆಆರ್‌ಎಸ್ ಅಣೆಕಟ್ಟೆ ಕೆಳಭಾಗದಲ್ಲಿ ನಿರ್ಮಿಸಿರುವ ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸುವ ಅವಧಿ ಹಲವು ವರ್ಷಗಳ ಹಿಂದೆಯೇ ಮುಗಿದಿದೆ. ಆದರೂ ನಿಗಮದ ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟು ಟೋಲ್ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಜಯಂತ್ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆದರು.
‘ಬೃಂದಾವನ ಪ್ರವೇಶ ಶುಲ್ಕ ಹೆಚ್ಚಳ ಹಾಗೂ ಕಾವೇರಿ ನದಿ ಸೇತುವೆ ಮೇಲೆ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹದ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಅದರಂತೆ, ಗುತ್ತಿಗೆ ಪಡೆದಿರುವ ಬೆಂಗಳೂರು ಮೂಲದ ಕೆಸಿಐಸಿ ಕಂಪೆನಿ ಟೋಲ್ ಮತ್ತು ಬೃಂದಾವನ ಪ್ರವೇಶ ಶುಲ್ಕ ಸಂಗ್ರಹಿಸುತ್ತಿದೆ. ಪ್ರತಿಭಟನೆ ವ್ಯಕ್ತವಾಗಿರುವುದರಿಂದ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ನಿಗಮದ ಎಇಇ ಮೊಹಮದ್ ಫಾರೂಕ್ ಅಬು ತಿಳಿಸಿದರು.
ರೈತ ಸಂಘದ ಪಾಂಡವಪುರ ತಾಲ್ಲೂಕು ಘಟಕದ ಕಾರ್ಯದರ್ಶಿ ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು, ಕೆಆರ್‌ಎಸ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಂದ್ರ, ಮಾಜಿ ಸದಸ್ಯ ಮಂಜುನಾಥ್, ನಾರ್ತ್ ಬ್ಯಾಂಕ್ ಜಗದೀಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಂಗಳವಾರದಿಂದ ಟೋಲ್ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಾಗುವುದು. ಹಿಂದಿನಂತೆ ತಲಾ ₹50 ಬೃಂದಾವನ ಪ್ರವೇಶ ಶುಲ್ಕ ಪಡೆಯಲಾಗುವುದುಜಯಂತ್ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.