
ಶ್ರೀರಂಗಪಟ್ಟಣ: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆ ಮತ್ತು ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ ಪಟ್ಟಣದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಿನಿ ವಿಧಾನಸೌಧದ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಬಾಂಗ್ಲಾ ದೇಶದ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು. ಬಾಂಗ್ಲಾ, ಪಾಕಿಸ್ತಾನ ಇತರ ದೇಶಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಬಾಂಗ್ಲಾ ಮತ್ತು ಪಾಕಿಸ್ತಾನಗಳಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಮತಾಂತರ, ಬಲವಂತದ ಮದುವೆ, ಹಲ್ಲೆ, ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಸಂಬಂಧಿಸಿದ ದೇಶಗಳ ಮುಖ್ಯಸ್ಥರ ಜತೆ ಚರ್ಚಿಸಿ ದೌರ್ಜನ್ಯಗಳನ್ನು ತಡೆಗಟ್ಟಬೇಕು. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಓಲೈಸುವ ಪ್ರವೃತ್ತಿ ನಿಲ್ಲಬೇಕು’ ಎಂದು ಮುಖಂಡ ಕೆ. ಚಂದನ್ ಒತ್ತಾಯಿಸಿದರು.
‘ಬಾಂಗ್ಲಾ ದೇಶದಲ್ಲಿ ದೀಪಕ್ ಚಂದ್ರದಾಸ್ ಹತ್ಯೆ ಅಲ್ಲಿನ ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಹಿಂದೂಗಳು ಮನೆಯಿಂದ ಹೊರಗೆ ಬಾರದ ಆತಂಕದ ಸ್ಥಿತಿ ನಿರ್ಮಾಣವಾಗಿದೆ’ ಎಂದು ವಕೀಲ ಟಿ. ಬಾಲರಾಜು ಕಳವಳ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತದ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.
ಬಾಂಗ್ಲಾದಲ್ಲಿ ಹತ್ಯೆಯಾದ ದೀಪಕ್ ಚಂದ್ರದಾಸ್ ಅವರಿಗೆ ಶ್ರದ್ಶಾಂಜಲಿ ಸಲ್ಲಿಸಲಾಯಿತು. ವಕೀಲರಾದ ಎ.ಟಿ. ಜಯಕುಮಾರ್, ಜಿ.ಎನ್. ರವೀಶ್, ಮುಖಂಡರಾದ ಎಸ್.ಎನ್. ವಾಸುದೇವ್, ಎನ್. ಸರಸ್ವತಿ, ಶಂಕರ್, ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.