ADVERTISEMENT

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:15 IST
Last Updated 23 ಡಿಸೆಂಬರ್ 2025, 6:15 IST
<div class="paragraphs"><p>ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ತಾಲ್ಲೂಕಿನ ಗೆಜ್ಜಲಗೆರೆ ಗ್ರಾ.ಪಂ. ಕಾರ್ಯಾಲಯದ ಮುಂದೆ ಸೋಮವಾರ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು</p></div>

ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ತಾಲ್ಲೂಕಿನ ಗೆಜ್ಜಲಗೆರೆ ಗ್ರಾ.ಪಂ. ಕಾರ್ಯಾಲಯದ ಮುಂದೆ ಸೋಮವಾರ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು

   

ಮದ್ದೂರು: ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಲು ಆಗ್ರಹಿಸಿ ಸೋಮವಾರ ರೈತ ಸಂಘದ ಮುಖಂಡರು, ಗ್ರಾಮಸ್ಥರು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಆರಂಭಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ನಾಯಕಿ ಸುನಂದಾ ಜಯರಾo ಮಾತನಾಡಿ, ‘ಹಲವು ತಿಂಗಳ ಹಿಂದೆಯೇ ಮದ್ದೂರು ನಗರಸಭೆಯಾಗುವುದಕ್ಕೂ ಮೊದಲೇ ನಮ್ಮ ಗೆಜ್ಜಲಗೆರೆ ಗ್ರಾಮವನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸದಂತೆ ಆಗ್ರಹಿಸಿ ಹಲವಾರು ಬಾರಿ ಗ್ರಾ.ಪಂ. ಕಚೇರಿಯ ಮುಂದೆ, ಮದ್ದೂರಿನ ತಾಲ್ಲೂಕು ಕಚೇರಿ ಹಾಗೂ ನಗರಸಭಾ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಲಾಗಿತ್ತು. ಆ ವೇಳೆ ಗ್ರಾಮಸ್ಥರು ಹಾಗೂ ಮುಖಂಡರ ಜೊತೆ ಸಭೆ ಕರೆದು ಮಾತನಾಡುವುದಾಗಿ ಶಾಸಕರಾದ ಕೆ.ಎಂ. ಉದಯ್ ಹೇಳಿದ್ದರು. ಆದರೆ ಸಭೆ ಮಾಡದೇ ಏಕ ಪಕ್ಷೀಯ ತೀರ್ಮಾನವನ್ನು ತೆಗೆದುಕೊಂಡಿರುವುದು ಖಂಡನೀಯ. ಜನವಿರೋಧಿ ನಿಲುವನ್ನು ತೆಗೆದುಕೊಂಡಿರುವ ಶಾಸಕರು ರಾಜೀನಾಮೆಯನ್ನು ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ರಾಜ್ಯಪಾಲರ ಆದೇಶವೇ ರದ್ದುಗೊಂಡಿರುವ ನಿದರ್ಶನಗಳು ಇದ್ದು, ಇದಕ್ಕೆ ಕಾರಣರಾಗಿರುವ ಶಾಸಕರೇ ಇದನ್ನು ರದ್ದು ಪಡಿಸಬೇಕು ಎಂದ ಅವರು ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆಯುವ ಮೊದಲೇ ಕೂಡಲೇ ಗೆಜ್ಜ ಲಗೆರೆ ಯನ್ನು ಮದ್ದೂರು ನಗರಸಭೆಗೆ ಸೇರಿಸಿರುವ ಕ್ರಮವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯ ಸ್ಥಳದಲ್ಲೇ ಅಡುಗೆ ತಯಾರಿಸಿ ಪ್ರತಿಭಟನಾಕಾರರು ಊಟ ಮಾಡಿದರು. ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಅಧ್ಯಕ್ಷೆ ರಾಧಾ, ಸದಸ್ಯರಾದ ದೀಪಕ್ ಜಿ, ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಸಿದ್ದೇಗೌಡ, ಪುಟ್ಟಸ್ವಾಮಿ, ಮುಖಂಡ ರಾದ ವೀರಪ್ಪ, ರಾಮಣ್ಣ,ಮಹೇಂದ್ರ, ತಾ. ಪಂ ಮಾಜಿ ಅಧ್ಯಕ್ಷ ಯೋಗೇಶ್, ಗ್ರಾ. ಪಂ ಸದಸ್ಯರುಗಳ ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಸತ್ಯ ಹಾಜರಿದ್ದರು.

ಗ್ರಾಮವನ್ನು ನಗರಸಭೆಗೆ ಸೇರ್ಪಡೆಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ನರೇಗಾ ಕೆಲಸಗಳು ಸಿಗುವುದಿಲ್ಲ ಅಷ್ಟೇ ಅಲ್ಲದೇ ಕಂದಾಯಗಳು ದುಬಾರಿಯಾಗುತ್ತವೆ
ಸುನಂದಾ ಜಯರಾಂ, ರೈತ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.