ADVERTISEMENT

ಮೊಬೈಲ್‌ ವ್ಯಸನದಿಂದ ಮಾನಸಿಕ ಸಮಸ್ಯೆ: ಹೆಚ್ಚುವರಿ ಜಿಲ್ಲಾಧಿಕಾರಿ

‘ಸುರಕ್ಷಿತ ಅಂತರ್ಜಾಲ ದಿನ’ದ ಅಂಗವಾಗಿ ಕಾರ್ಯಾಗಾರ; ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:30 IST
Last Updated 11 ಫೆಬ್ರುವರಿ 2026, 7:30 IST
ಮಂಡ್ಯ ಜಿಲ್ಲಾಡಳಿತ ವತಿಯಿಂದ ‘ಸುರಕ್ಷಿತ ಅಂತರ್ಜಾಲ ದಿನ’ದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು. ಸಂಗೀತಾ ಮಂಜುನಾಥ್‌, ಅಪ್ಪಾರಾವ್‌ ಇದ್ದಾರೆ
ಮಂಡ್ಯ ಜಿಲ್ಲಾಡಳಿತ ವತಿಯಿಂದ ‘ಸುರಕ್ಷಿತ ಅಂತರ್ಜಾಲ ದಿನ’ದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿದರು. ಸಂಗೀತಾ ಮಂಜುನಾಥ್‌, ಅಪ್ಪಾರಾವ್‌ ಇದ್ದಾರೆ   

ಮಂಡ್ಯ: ‘ಪ್ರಸ್ತುತ ದಿನಗಳಲ್ಲಿ ಮಕ್ಕಳು ಮೊಬೈಲ್‌ ಹೆಚ್ಚಾಗಿ ಬಳಸುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಮಕ್ಕಳ ಮನಸ್ಥಿತಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ‘ಸುರಕ್ಷಿತ ಅಂತರ್ಜಾಲ ದಿನ’ದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ನಮ್ಮ ಸಮಯವನ್ನು ಬಹುತೇಕ ಟಿ.ವಿ, ಮೊಬೈಲ್‌ಗಳಲ್ಲಿಯೇ ಕಳೆಯುತ್ತಿದ್ದೇವೆ. ಸಾಮಾಜಿಕ ಜವಾಬ್ದಾರಿಯನ್ನು ಮರೆತಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಅತಿಯಾದ ಮೊಬೈಲ್ ಬಳಕೆಯಿಂದ ಮಿದುಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯರಲ್ಲಿ ಹೆಚ್ಚಾಗುತ್ತಿವೆ. 20 ವರ್ಷಗಳ ಹಿಂದೆ ಜನರು ತಮ್ಮ ಕುಟುಂಬ ಸ್ನೇಹಿತರೊಂದಿಗೆ ಸಮಯ ಕಳೆದು ಕೆಲಸದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು. ಆದರೆ ಇಂದು ಅತಿಯಾದ ಮೊಬೈಲ್ ಬಳಕೆಯಿಂದ ಎಲ್ಲರ ಬದುಕಿನಲ್ಲಿಯೂ ಒತ್ತಡ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಖಾಸಗಿ ಮತ್ತು ಕಚೇರಿಯ ದಾಖಲೆ, ಮಾಹಿತಿ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್‌ಗಳ್ಳರು ನಿಮ್ಮ ಸಂಪೂರ್ಣ ಮಾಹಿತಿಯನ್ನು ಪಡೆದು ನಿಮ್ಮ ಹಿಂದೆ ಬೀಳುತ್ತಾರೆ. ಸೈಬರ್ ಕಳ್ಳರಿಂದ ಯಾವುದೇ ಕರೆ ಬಂದರೂ ಧೃತಿಗೆಡದೆ ಸೈಬರ್ ಸಹಾಯವಾಣಿಗೆ ಕರೆ ಮಾಡಿ ಪ್ರಕರಣ ದಾಖಲಿಸಿ ಎಂದರು. 

ಕಾರ್ಯಾಗಾರದ ನಂತರ ಸೈಬರ್ ಕ್ರೈಂಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ರಾಷ್ಟ್ರೀಯ ಮಾಹಿತಿ ಕೇಂದ್ರದ ಅಪ್ಪಾರಾವ್‌, ರಾಷ್ಟ್ರೀಯ ಮಾಹಿತಿ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಪಂಚಾಯಿತಿ ನೌಕರರು ಪಾಲ್ಗೊಂಡಿದ್ದರು.

‘ಒಟಿಪಿ ಯುಪಿಐ ಪಿನ್‌ ಹಂಚಿಕೊಳ್ಳಬೇಡಿ’

ರಾಷ್ಟ್ರೀಯ ಮಾಹಿತಿ ಕೇಂದ್ರದ ಹಿರಿಯ ತಾಂತ್ರಿಕ ನಿರ್ದೇಶಕಿ ಸಂಗೀತಾ ಮಂಜುನಾಥ್ ಮಾತನಾಡಿ ‘ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಮಕ್ಕಳು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಮರೆತು ಹೋಗಿದ್ದಾರೆ’ ಎಂದು ಹೇಳಿದರು.

‘ಅಪರಿಚಿತ ನಂಬರ್‌ಗಳಿಂದ ಕರೆ ಮಾಡಿ ಓ.ಟಿ.ಪಿ ಯು.ಪಿ.ಐ ಪಿನ್ ಅನ್ನು ಯಾರೇ ಕೇಳಿದರು ಹೇಳಬೇಡಿ. ಇಂತಹ ಕರೆ ಬಂದ ನಂತರ ಗಾಬರಿಯಾಗದೆ ಐ.ಟಿ ಸೈಬರ್ ನಂಬರ್ 930ಗೆ ಕರೆ ಮಾಡಿ ಅಥವಾ ‘ಸಂಚಾರ್ ಸಾಥಿ’ ವೆಬ್‌ನಲ್ಲಿ ಪ್ರಕರಣ ದಾಖಲಿಸಿ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.