ADVERTISEMENT

ಗಾಂಧೀಜಿಯ ಅಹಿಂಸಾತ್ಮಕ ಹೋರಾಟ ಪ್ರಸ್ತುತ: ಆರ್‌.ಅಶೋಕ

ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ; ಧ್ವಜಾರೋಹಣೆ ನೆರವೇರಿಸಿದ ಕಂದಾಯ ಸಚಿವ ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 16:34 IST
Last Updated 15 ಆಗಸ್ಟ್ 2022, 16:34 IST
ಮಂಡ್ಯ ನಗರದ ಸರ್‌ ಎಂ.ವಿ.ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು
ಮಂಡ್ಯ ನಗರದ ಸರ್‌ ಎಂ.ವಿ.ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು   

ಮಂಡ್ಯ: ‘ರಕ್ತಪಾತ, ಹಿಂಸೆ, ಮದ್ದು–ಗುಂಡು ಗಳ ಕಾಳಗವಿಲ್ಲದೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ಮಹಾತ್ಮ ಗಾಂಧೀಜಿ ನಡೆಸಿದ ಅಹಿಂಸಾತ್ಮಕ ಹೋರಾಟ ವಿಶ್ವದ ಇತಿಹಾಸದಲ್ಲೇ ಸದಾ ಉಳಿಯುವಂಥದ್ದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಬಣ್ಣಿಸಿದರು.

ನಗರದ ಸರ್‌ ಎಂ.ವಿ.ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದಸ್ವಾತಂತ್ರ್ಯ ದಿನಾ ಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

‘ಬ್ರಿಟಿಷರ ಸರ್ವಾಧಿಕಾರದ ಆಳ್ವಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾತ್ಮ ಗಾಂಧೀಜಿ ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಸತ್ಯ, ಅಹಿಂಸೆ, ಸತ್ಯಾಗ್ರಹದಂಥ ಅಸ್ತ್ರಗಳ ಮೂಲಕ ಬ್ರಿಟಿಷರನ್ನು ದೇಶ ಬಿಟ್ಟು ಹೋಗುವಂತೆ ಮಾಡಿದ ವಿನೂತನ ಹೋರಾಟ ಅವರದ್ದು’ ಎಂದು ಸ್ಮರಿಸಿದರು.

ADVERTISEMENT

ಸ್ವಾತಂತ್ರ್ಯ ಹೋರಾಟದಲ್ಲಿ ಎಚ್.ಕೆ.ವೀರಣ್ಣಗೌಡ, ಟಿ.ಸಿದ್ದಲಿಂಗಯ್ಯ, ಎಚ್.ಸಿ.ದಾಸಪ್ಪ, ಇಂಡುವಾಳು ಹೊನ್ನಯ್ಯ, ಹೊನಗನಹಳ್ಳಿ ಪುಟ್ಟಣ್ಣ, ಶಿವಪುರ ತಿರುಮಲೇಗೌಡ, ಟಿ.ಎನ್.ಮಾದಪ್ಪಗೌಡ, ಎಂ.ಮಹಾಬಲರಾವ್, ವೆಂಕಟಗಿರಿಯಪ್ಪ, ಡಾ.ಪಶುಪತಿರಾವ್, ಮಳವಳ್ಳಿ ವೀರಪ್ಪ, ಎಸ್.ಎಂ.ಮಲ್ಲಯ್ಯ ಅವರು ಭಾಗವಹಿಸಿದಬಹುದೊಡ್ಡ ಸಂಸ್ಕೃತಿಯೇ ಮಂಡ್ಯ ಜಿಲ್ಲೆಯಲ್ಲಿದೆ ಎಂದರು.

ಸಾಮರಸ್ಯಕ್ಕೆ, ಸಹಬಾಳ್ವೆಗೆ ಮಂಡ್ಯ ಜಿಲ್ಲೆ ಬಹುದೊಡ್ಡ ಉದಾಹರಣೆಯಾಗಿದ್ದು, ಕೃಷಿಯ ಅಭ್ಯುದಯಕ್ಕೆ, ಸಾಹಸ ಕ್ರೀಡೆಗೆ, ಉದ್ದಿಮೆಗಳ ಸ್ಥಾಪನೆಗೆ, ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ, ಪರಿಸರದ ಸಿರಿಯನ್ನು ಹೆಚ್ಚಿಸಲು ಬೇಕಾದ ಎಲ್ಲ ಅವಕಾಶಗಳನ್ನು ಮಂಡ್ಯ ಜಿಲ್ಲೆ ತನ್ನ ಮಡಿಲಿನಲ್ಲಿ ಇರಿಸಿಕೊಂಡಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು 2022-23ನೇ ಸಾಲಿನ ಬಜೆಟ್‌ನಲ್ಲಿ ₹ 50 ಕೋಟಿ ಮಂಜೂರು ಮಾಡಿ ಮೈಷುಗರ್‌ ಕಾರ್ಖಾನೆ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಂಡಿದೆ. ಆಗಸ್ಟ್‌ನಲ್ಲೇ ಕಾರ್ಖಾನೆಗೆ ಚಾಲನೆ ನೀಡಲಾಗುವುದು. ರೈತ ಮಕ್ಕಳ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 28,988 ವಿದ್ಯಾರ್ಥಿಗಳಿಗೆ ₹11.96 ಕೋಟಿ ಶಿಷ್ಯವೇತನ ನೀಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2,70,572 ಫಲಾನುಭವಿಗಳಿಗೆ ತಲಾ ₹6000 ಸಹಾಯ ಧನ ನೀಡಲಾಗಿದೆ ಎಂದರು.

ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳ ಪೈಕಿ 231 ಗ್ರಾ.ಪಂ.ಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಜಮೀನು ಕಾಯ್ದಿರಿಸಲಾಗಿದೆ. ಒಟ್ಟು 1,348 ಜನವಸತಿ ಗ್ರಾಮಗಳ ಪೈಕಿ ಇದುವರೆಗೆ 1,322 ಗ್ರಾಮಗಳಿಗೆ ಸಾರ್ವಜನಿಕ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 4 ವರ್ಷಗಳಲ್ಲಿ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು 244 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಯಡಿ ಮಂಡ್ಯ ಜಿಲ್ಲೆಯ ಒಟ್ಟು 2,92,882 ಕುಟುಂಬಗಳಿಗೆ ಉಚಿತವಾಗಿ ಆರ್.ಟಿ.ಸಿ., ಅಟ್ಲಾಸ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದರು.

ಮಂಡ್ಯ ಜಿಲ್ಲೆಯ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲು ಒಟ್ಟು 137 ಗ್ರಾಮಗಳಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 100 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, 740 ಜನರಿಗೆ ಹಕ್ಕು ಪತ್ರ ನೀಡಲಾಗಿದೆ.ಜಿಲ್ಲೆಯಲ್ಲಿ ಒಟ್ಟು 309 ಗ್ರಾಮ ಒನ್ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಈ ಕೇಂದ್ರಗಳಲ್ಲಿ 79 ಇಲಾಖೆಗಳ ಒಟ್ಟು 799 ಸೇವೆಗಳು ಲಭ್ಯವಿದೆ.ಹಲೋ ಕಂದಾಯ ಸಚಿವರೇ ಯೋಜನೆಯಡಿ 72 ಗಂಟೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಲ ಜೀವನ್ ಮಿಷನ್ ಹಂತ–1 ರಲ್ಲಿ ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲ್ಲೂಕಿನ ಒಟ್ಟು 794 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ. ಹಂತ-2ರಲ್ಲಿ ಮದ್ದೂರು, ಮಳವಳ್ಳಿ, ಮಂಡ್ಯ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಒಟ್ಟು 570 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತೆಗೆದುಕೊಳ್ಳಲಾಗಿದೆ ಎಂದರು.

ಪೂರಿಗಾಲಿ ಸಮಗ್ರ ಹನಿ, ತುಂತುರು ನೀರಾವರಿ ಯೋಜನೆ ಕಾಮಗಾರಿಯನ್ನು ಅಂದಾಜು ಮೊತ್ತ ₹593 ಕೋಟಿಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಬಸವ ವಸತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಒಟ್ಟು 8,700 ಫಲಾನುಭವಿಗಳ ಆಯ್ಕೆ ಗುರಿಯನ್ನು ಜಿಲ್ಲೆಯಲ್ಲಿನ ಗ್ರಾ.ಪಂ.ಗಳಿಗೆ ವರ್ಗವಾರು ನಿಗದಿಪಡಿಸಲಾಗಿದೆ. 2022-23ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ 151 ಎಕರೆ ಸರ್ಕಾರಿ, ಖಾಸಗಿ ಜಮೀನು ನಿವೇಶನ ಹಂಚಲು ಜಿಲ್ಲೆಯಲ್ಲಿ ಲಭ್ಯವಿದ್ದು, ಸದರಿ ಜಮೀನುಗಳಲ್ಲಿ 3,020 ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು ಎಂದರು.

ದೇವರಾಜ ಅರಸು ವಿಶೇಷ ವಸತಿ ಯೋಜನೆಯಡಿ ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿ ಬೀಡಿಕಾರ್ಮಿಕರಿಗೆ 510 ಗುಂಪು ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಬಿಎಲ್‌ಸಿ ಉಪ ಘಟಕದಡಿ 2,134 ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂಡ್ಯ ನಗರದಲ್ಲಿ ರಾಜೀವ್ ಆವಾಸ್ ಯೋಜನೆಯಡಿ 1,335 ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಸಂಸದೆ ಸುಮಲತಾ ಅಂಬರೀಷ್‌, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ.ಸಿಇಒ ಶಾಂತ ಎಲ್.ಹುಲ್ಮನಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಭಾಗವಹಿಸಿದ್ದರು.

ಪಥಸಂಚಲನ; ವಿಜೇತರು

ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಪ್ರ), ಅಬಕಾರಿ ಇಲಾಖೆ (ದ್ವಿ), ಜಿಲ್ಲಾ ಗೃಹ ರಕ್ಷಕ ಪುರುಷದಳ (ತೃ), ಶಾಲಾ ವಿಭಾಗದಲ್ಲಿ ಆದರ್ಶ ಪ್ರೌಢಶಾಲೆ (ಪ್ರ), ಪಿ.ಇ.ಎಸ್.ಪ್ರೌಢಶಾಲೆ (ದ್ವಿ), ಅರಕೇಶ್ವರ ನಗರ ಪ್ರೌಢಶಾಲೆ (ತೃ), ಎನ್.ಸಿ.ಸಿ ವಿಭಾಗದಲ್ಲಿ ಪಿ.ಇ.ಎಸ್.ಬಾಲಕರ ತಂಡ (ಪ್ರ), ಸರ್ಕಾರಿ ಬಾಲಕರ ಕಾಲೇಜು (ದ್ವಿ), ಸರ್ಕಾರಿ ಮಹಿಳಾ ಕಾಲೇಜು (ತೃ), ಶಾಲಾ ವಿಭಾಗದಲ್ಲಿ ಕಾರ್ಮೆಲ್ ಕಾನ್ವೆಂಟ್ (ಪ್ರ), ಸೇಂಟ್ ಜೋಸೆಫ್ ಪ್ರೌಢಶಾಲೆ (ದ್ವಿ), ರೋಟರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.