ನಾಗಮಂಗಲ: ಗಣೇಶೋತ್ಸವದ ಅಂಗವಾಗಿ ಇಲ್ಲಿನ ಶ್ರೀರಾಮ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ತಾಲ್ಲೂಕಿನ ಕೆಂಚೇಗೌಡನ ಕೊಪ್ಪಲು ಗ್ರಾಮದ ಯೋಗೇಶ್ ನಿಗದಿತ ಸಮಯದಲ್ಲಿ ಆರು ಮುದ್ದೆ ಉಣ್ಣುವ ಮೂಲಕ ಪ್ರಥಮಸ್ಥಾನ ಪಡೆದರು.
ತಾಲ್ಲೂಕಿನ ಪಾಲಾಗ್ರಹಾರ ಗ್ರಾಮದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 30 ನಿಮಿಷದಲ್ಲಿ ಆರು ಮುದ್ದೆ ತಿಂದ ಯೋಗೇಶ್‌ಗೆ ಒಂದು ಟಗರು, ಐದು ಮುದ್ದೆ ತಿಂದು ಎರಡನೇ ಸ್ಥಾನ ಪಡೆದ ನವೀನ್ ದೊಂದೇಮಾದಳ್ಳಿ ಅವರಿಗೆ ₹ 10 ಸಾವಿರ, ಮೂರು ಮುದ್ದೆ ತಿಂದು ಮೂರನೇ ಬಹುಮಾನ ಪಡೆದ ಪಾಲಾಗ್ರಹಾರ ಶರತ್ ಕುಮಾರ್‌ಗೆ ₹ ಐದು ಸಾವಿರ, 4 ಮತ್ತು 5ನೇ ಸ್ಥಾನ ಪಡೆದ ರಾಜಣ್ಣ ಕುಪ್ಪಳ್ಳಿ ಮತ್ತು ದೊಂದೇಮಾದಹಳ್ಳಿ ಅರುಣ್ ಕುಮಾರ್ ಅವರಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.
ಸ್ಪರ್ಧೆಯಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 30 ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಆತುರದಲ್ಲಿ ಸ್ಪರ್ಧೆಗಳು ಮಾಡುತ್ತಿದ್ದ ಕಸರತ್ತುಗಳು ನೋಡುಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದವು.
ಗ್ರಾಮದ ಮುಖಂಡರಾದ ಪಿ.ಡಿ.ತಿಮ್ಮಯ್ಯ, ಪಿ.ಆರ್.ರಮೇಶ್, ವಕೀಲ ಪಿ.ಸಿ.ಮಂಜುನಾಥ್, ನಾರಾಯಣ, ಆನಂದ್, ಗ್ರಾಮ ಪಂಚಾಯಿತಿ ಸದಸ್ಯ ವಿನಯ್ ಕುಮಾರ್, ಯುವಕ ಸಂಘದ ಅಧ್ಯಕ್ಷ ಮಂಜುನಾಥ, ಖಜಾಂಚಿ ನವೀನ್, ಹೇಮಂತ್, ಗುರುಪ್ರಸಾದ್, ಶಿಕ್ಷಕ ಪಿ.ಆರ್.ರಾಮಚಂದ್ರ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.