ADVERTISEMENT

ಮಂಡ್ಯ| ಏಕ ಸಂಸ್ಕೃತಿ ಚಿಂತನೆ ಅಪಾಯಕಾರಿ: ಸಾಹಿತಿ ರಹಮತ್‌ ತರೀಕೆರೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:58 IST
Last Updated 5 ಆಗಸ್ಟ್ 2025, 2:58 IST
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುತ್ವ ಕರ್ನಾಟಕ’ ಕೃತಿ ಸಂವಾದದಲ್ಲಿ ಸಾಹಿತಿ ರಹಮತ್ ತರೀಕೆರೆ ಮಾತನಾಡಿದರು
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುತ್ವ ಕರ್ನಾಟಕ’ ಕೃತಿ ಸಂವಾದದಲ್ಲಿ ಸಾಹಿತಿ ರಹಮತ್ ತರೀಕೆರೆ ಮಾತನಾಡಿದರು   

ಮಂಡ್ಯ: ‘ವೈವಿಧ್ಯತೆಯೇ ಬಹುತ್ವ ಅಲ್ಲ. ಬಹುತ್ವ ಎಂದರೆ ಸಮಾನವಾದ ಅವಕಾಶ. ಒಂದೇ ಸಂಸ್ಕೃತಿ, ಒಂದೇ ನಾಯಕತ್ವ, ಒಂದೇ ಧರ್ಮ, ಒಂದೇ ರೀತಿ ಊಟ, ಸಿದ್ಧಾಂತವನ್ನು ಹೇರುವುದು ಅಪಾಯಕಾರಿ. ಇವುಗಳನ್ನು ಹೇರುವ ದೇಶಗಳು ಬಿಕ್ಕಟ್ಟುಗಳಲ್ಲಿ ಸಿಲುಕಿವೆ’ ಎಂದು ಸಾಹಿತಿ ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಎಂ.ಆರ್.ಎಂ. ಪ್ರಕಾಶನದ ವತಿಯಿಂದ ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಬಹುತ್ವ ಕರ್ನಾಟಕ’ ಕೃತಿ ಸಂವಾದದಲ್ಲಿ ಅವರು ಮಾತನಾಡಿದರು.

‘ಪ್ರತಿ ಸಮಾಜದಲ್ಲೂ ಹೊಸ ಬಿಕ್ಕಟ್ಟು ಬಂದಾಗ ಹೊಸ ಸ್ಟೇಟ್‌ಮೆಂಟ್‌ ಬಂದಿದೆ. ಧರ್ಮದ ಹೆಸರಿನಲ್ಲಿ ವಿಕಾರಗಳು ಹುಟ್ಟಿದಾಗ ಹೊಸ ಧರ್ಮಗಳು ಹುಟ್ಟಿವೆ. ಪ್ರಜಾ ಪ್ರಭುತ್ವವಿರುವ ರಾಷ್ಟ್ರಗಳಲ್ಲಿ ಸಾಮಾಜಿಕ ಪ್ರಜಾಭುತ್ವ ನಾಶವಾಗಿದೆ. ಉದಾ: ಅಮೆರಿಕದಲ್ಲಿ ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲ. ನಮ್ಮಲ್ಲೂ ಸಾಮಾಜಿಕ ಪ್ರಜಾಪ್ರಭುತ್ವ ಇದೆಯೇ? ಕೇಳಿಕೊಳ್ಳಬೇಕಾಗಿದೆ’ ಎಂದರು.

ADVERTISEMENT

‘ವೈವಿಧ್ಯ ಇರುವುದು ದೊಡ್ಡ ಸಂಗತಿಯಲ್ಲ, ಅದನ್ನು ಸಂಭಾಳಿಸುವುದು ದೊಡ್ಡ ಸಂಗತಿ. ಬಹುತ್ವ ಏಕತ್ವದ ಕಡೆ ಮುಖ ಮಾಡಿರುವುದು ಅಪಾಯಕಾರಿ. ವಚನಕಾರರು ಸಂಸ್ಕೃತ ಪಳಗಿಸಿದರು. ನಮ್ಮದು ಹಲವು ಕನ್ನಡಂಗಳ್ ಎಂದು ಕವಿರಾಜ ಮಾರ್ಗ ಹೇಳಿದೆ. ವೈವಿಧ್ಯಮಯ ಭಾಷೆ ನಮ್ಮದು. ಭಾರತದ ದೊಡ್ಡತನ ಜಗತ್ತಿನ ಅತ್ಯುತ್ತಮವಾದದ್ದು ಬಂದಾಗಲೆಲ್ಲ ಸ್ವೀಕಾರ ಮಾಡಿದೆ. ‘ವೇದಾಂತ ತಲೆ ಇಸ್ಲಾಂನ ದೇಹ’ ಕೂಡಿದರೆ ಭಾರತಕ್ಕೆ ಹೊಸ ನೆಲೆ ಬರುತ್ತದೆ’ ಎಂದರು.

‘ಮಾಧ್ಯಮಗಳಲ್ಲಿ ಕಲ್ಚರಲ್ ಅನಕ್ಷರತೆ ಕಾಣುತ್ತಿದ್ದೇವೆ. ಮನುಷ್ಯರ ಘನತೆಯನ್ನು ಮಾಧ್ಯಮಗಳು ಎತ್ತಿ ಹಿಡಿಯುತ್ತಿಲ್ಲ. ಕಳೆದ 10 ವರ್ಷಗಳಲ್ಲಿ ತಿನ್ನುವ ಆಹಾರವನ್ನು ಗೇಲಿ ಮಾಡಲಾಗಿದೆ. ಶಾಲೆಗಳಲ್ಲಿ ದಲಿತ ಮಹಿಳೆ ಅಡುಗೆ ಮಾಡಿದರೆ ಮಕ್ಕಳು ಊಟ ಮಾಡುವುದಿಲ್ಲ. ಸ್ವಾತಂತ್ರ್ಯ ದಿನದಂದು ಶಿಕ್ಷಕರು ಅಂಬೇಡ್ಕರ್ ಫೋಟೋ ಇಡುವುದಿಲ್ಲ. ಶಿಕ್ಷಕರು, ವೈದ್ಯರು ಜಾತಿವಾದಿಗಳಾಗಿ ಕಲುಷಿತರಾದರೆ, ಏಕ ಸಂಸ್ಕೃತಿಯನ್ನು ಹೇರಿದರೆ ಆ ಸಮಾಜ ಸಾಯುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಂ.ಆರ್.ಎಂ. ಪ್ರಕಾಶನದ ಪ್ರಕಾಶಕರಾದ ಮಂಜು ಮುತ್ತೇಗೆರೆ ಮಾತನಾಡಿದರು. ಲೇಖಕ ಲೋಕೇಶ್ ಬೆಕ್ಕಳಲೆ ಪ್ರಾಸ್ತಾವಿಕ ನುಡಿಗಳನ್ನಾಡಿ, ಈ ದೇಶದ ಭವಿಷ್ಯ ಇರುವುದು ಬಹುತ್ವದಲ್ಲಿ. ಅದನ್ನು ಮರೆತರೆ ಈ ದೇಶಕ್ಕೆ, ನಾಡಿಗೆ ಅಥವಾ ಮುಂದಿನ ಪೀಳಿಗೆಗೆ ಯಾವುದೇ ಭವಿಷ್ಯ ಇರುವುದಿಲ್ಲ ಎಂದರು. 

ಸಾಹಿತ್ಯಾಸಕ್ತರಿಂದ ಸಂವಾದ:

ಮಂಡ್ಯ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ 17 ಸಾಹಿತ್ಯಾಸಕ್ತರು ‘ಬಹುತ್ವ ಕರ್ನಾಟಕ’ ಕೃತಿಯನ್ನು ಓದಿದ ನಂತರ ತಮ್ಮಲ್ಲಿ ಎದ್ದ ಪ್ರಶ್ನೆಗಳಿಗೆ ಲೇಖಕರ ಬಳಿ ಪರಿಹಾರ ಪಡೆದುಕೊಂಡರು. ಬಹುತ್ವ ಕರ್ನಾಟಕ ಕೃತಿಯ ಮಿತಿ ಮತ್ತು ಅನಂತತೆಯನ್ನು ವಿವರಿಸಿ ಕೃತಿಕಾರರನ್ನೂ ಚಿಂತನೆಗೆ ಹಚ್ಚಿದರು. ಸುದೀರ್ಘ ನಾಲ್ಕು ಗಂಟೆ ನಡೆದ ಸಂವಾದದಲ್ಲಿ ಕೃತಿಯಿಂದಾಚೆಗೆ ಜನರ ಸ್ಥಿತಿ-ಗತಿಯನ್ನು ಚರ್ಚಿಸಲಾಯಿತು. ಸಾಹಿತಿ ಮಹೇಶ್ ಹರವೆ ಕುವೆಂಪು ಅವರ ಮಲೆಗಳಲ್ಲಿ ಮದುಮಗಳ ಕಾದಂಬರಿಯ ಆರಂಭದ ಸಾಲುಗಳನ್ನು ಓದಿ ಸಂವಾದಕ್ಕೆ ಚಾಲನೆ ನೀಡಿದರು. ಕವಿ ಕೊತ್ತತ್ತಿ ರಾಜು ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪತ್ರಕರ್ತ ಪ್ರಕಾಶಕ ಚಂದ್ರಶೇಖರ ದ.ಕೋ.ಹಳ್ಳಿ ಲೋಕೇಶ್ ನೇರಲಕೆರೆ ನಿರ್ವಹಿಸಿದರು. ಕವಿ ಪ್ರಕಾಶಕ ರಾಜೇಂದ್ರ ಪ್ರಸಾದ್ ಸೇರಿ ಹಲವು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.