ADVERTISEMENT

ಕನ್ನಡದಲ್ಲೇ ರೈಲ್ವೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 7:08 IST
Last Updated 20 ಡಿಸೆಂಬರ್ 2025, 7:08 IST
ರೈಲ್ವೆ ನೇಮಕಾತಿ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ, ಕೆಆರ್‌ಎಸ್‌, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಡ್ಯ ನಗರದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು
ರೈಲ್ವೆ ನೇಮಕಾತಿ ಪರೀಕ್ಷೆ ಕನ್ನಡದಲ್ಲೇ ಬರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ, ಕೆಆರ್‌ಎಸ್‌, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಡ್ಯ ನಗರದ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು   

ಮಂಡ್ಯ: ರೈಲ್ವೆ ನೇಮಕಾತಿ ಪರೀಕ್ಷೆ ಸೇರಿದಂತೆ ನೌಕರರ ಮುಂಬಡ್ತಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರುನಾಡ ಸೇವಕರು ಸಂಘಟನೆ, ಕೆಆರ್‌ಎಸ್‌, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ರೈಲು ನಿಲ್ದಾಣದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈಲ್ವೆ ನಿಲ್ದಾಣದ ಎದುರು ಜಮಾವಣೆಗೊಂಡ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈಲ್ವೆ ಇಲಾಖೆಯಲ್ಲಿ ಮೊದಲಿನಿಂದಲೂ ಕನ್ನಡಿಗರನ್ನು ವಂಚಿಸುತ್ತಾ ಬಂದಿದೆ. ರೈಲ್ವೆ ನೇಮಕಾತಿಗಳ ಬಡ್ತಿ ಬಗೆಗಿನ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ನಡೆಸುವ ಮೂಲಕ ಉನ್ನತ ಹುದ್ದೆಗಳನ್ನು ಕನ್ನಡಿಗರಿಗೆ ತಪ್ಪಿಸುವ ಹುನ್ನಾರ ನಡೆದಿದೆ ಎಂದು ಕಿಡಿಕಾರಿದರು.

ರೈಲ್ವೆಯಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆ ಇದೆ. ರಾಜ್ಯದ ರೈಲ್ವೆ ಮಂತ್ರಿಯೊಬ್ಬರು ಇದ್ದಾಗಲೂ, ಇದೊಂದು ಕಣ್ತಪ್ಪಿನಿಂದ ಆಗಿರುವ ಪ್ರಮಾದವೆಂದು ರೈಲ್ವೆ ಅಧಿಕಾರಿಗಳು ಭಂಡ ಸಮರ್ಥನೆಗೆ ಇಳಿದಿದ್ದಾರೆ. ಇನ್ನು ಮುಂದೆ ಈ ತರಹದ ಹೇಳಿಕೆಗಳನ್ನು ನೀಡದೇ ಸರಿಯಾಗಿ ಕನ್ನಡಿಗರ ಪರವಾಗಿ ಕೆಲಸ ಮಾಡಿದರೆ ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಮೈಸೂರು ಸಂಸ್ಥಾನದಲ್ಲಿ ನಮ್ಮದೇ ರೈಲ್ವೆ ವ್ಯವಸ್ಥೆ ಉತ್ತಮವಾಗಿತ್ತು. ಆದರೆ, ವಾರ್ಷಿಕ ₹4 ಲಕ್ಷ ಕೋಟಿ ತೆರಿಗೆ ಸಲ್ಲಿಸುವ ಕರ್ನಾಟಕ ಅಗತ್ಯ ರೈಲ್ವೆ ಯೋಜನೆಗಳಿಲ್ಲದೆ ನರಳುತ್ತಿದೆ. ಕಳೆದ ಮೂರು ದಶಕದಿಂದಲೂ ತುಮಕೂರು, ಚಾಮರಾಜನಗರ ಹಾಗೂ ಹೆಜ್ಜಾಲ-ಕನಕಪುರ-ಚಾಮರಾಜನಗರ ಉದ್ದೇಶಿತ ರೈಲ್ವೆ ಯೋಜನೆಗಳು ಕಡತದಲ್ಲೇ ದೂಳು ಹಿಡಿಯುತ್ತಿವೆ ಎಂದು ಆರೋಪಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್‌ಗೌಡ ಮಾತನಾಡಿ, ಕನ್ನಡಿಗರ ಮೊದಲ ಆದ್ಯತೆ ನೀಡಬೇಕು. ಮಂಡ್ಯ ನಗರ ರೈಲ್ವೆ ನಿಲ್ದಾಣದಲ್ಲಿ ಹಲವು ಸಮಸ್ಯೆಗಳಿವೆ. ಮಂಡ್ಯದ ಸ್ಥಳೀಯ ಸೊಗಡಿನ ರಾಗಿಮುದ್ದೆ ಊಟ ಹಾಗೂ ಕಬ್ಬಿನ ಹಾಲು ಮಾರಾಟ ಕೇಂದ್ರಕ್ಕೆ ಅಗತ್ಯ ಸ್ಥಳಾವಕಾಶ ಒದಗಿಸಬೇಕು. ಪೇಟೆಬೀದಿ ಭಾಗದ ಪ್ರವೇಶ ದ್ವಾರದಲ್ಲಿ ಟಿಕೆಟ್ ವಿತರಣಾ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುದ್ದೇಗೌಡ, ಪ್ರವೀಣ್, ಮಲ್ಲೇಶ್‌ ಹೆಬ್ಬಕವಾಡಿ, ಹನಿಯಂಬಾಡಿ ಶೇಖರ್, ವೈರಮುಡಿ, ಸಂತೆಕಸಲಗೆರೆ ಬಸವರಾಜು, ಆಟೋ ಘಟಕದ ವೆಂಕಟೇಶ್, ಸೋಮಶೇಖರ, ದೀಪಿಕಾ, ಕೋಣನಹಳ್ಳಿ ಯೋಗೇಶ್, ಭಗವಾನ್ ಭಾಗವಹಿಸಿದ್ದರು.

ಕನ್ನಡದಲ್ಲೇ ಪರೀಕ್ಷೆ: ಭರವಸೆ

ಮನವಿ ಸ್ವೀಕರಿಸಿದ ರೈಲ್ವೆ ವಾಣಿಜ್ಯ ವಿಭಾಗದ ಮುಖ್ಯಸ್ಥ ಧನಂಜಯ ಮಾತನಾಡಿ ಈಗಾಗಲೇ ರೈಲ್ವೆ ಪರೀಕ್ಷೆಗಳು ಕನ್ನಡದಲ್ಲಿ ಅವಕಾಶ ನೀಡಲು ಸಂಬಂಧಿಸಿದ ಸಚಿವರು ಸೂಚಿಸಿದ್ದಾರೆ. ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ಪೇಟೆಬೀದಿಗೆ ಹೊಂದಿಕೊಂಡಂತೆ ಟಿಕೆಟ್ ವಿತರಣಾ ಕೇಂದ್ರ ಆರಂಭಿಸಲಾಗುವುದು. ನಿಲ್ದಾಣದ ಆವರಣದಲ್ಲಿ ಮಂಡ್ಯ ಸೊಗಡಿನ ರಾಗಿಮುದ್ದೆ ಊಟ ಕಬ್ನಿನ ಹಾಲು ಕೇಂದ್ರ ತೆರೆಯಲು ಅಗತ್ಯ ಕ್ರಮವಹಿಸುವ ಹಾಗೂ ಪಾರ್ಕಿಂಗ್ ದರಗಳನ್ನು ಇಳಿಸಲು ಮತ್ತು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಲು ಸೂಚಿಸುವ ಭರವಸೆ ನೀಡಿದರು.

ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆ: ಆರೋಪ

ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಮಾತನಾಡಿ ವ್ಯವಸ್ಥಿತವಾಗಿ ರೈಲ್ವೆ ಉದ್ಯೋಗಗಳಿಂದ ಕನ್ನಡಿಗರನ್ನು ಕೈಬಿಡುವ ದುಷ್ಟ ಆಲೋಚನೆಯಾಗಿದ್ದು ಹದಿನೈದು ದಿನದ ಹಿಂದೆ ನಡೆದ ಸ್ಟೇಷನ್ ಮಾಸ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲೂ ಸಹ ಕನ್ನಡವನ್ನು ಕೈಬಿಡಲಾಗಿದೆ. ಇದು ಒಕ್ಕೂಟ ಸರ್ಕಾರ ನಡೆಸುವ ಯಾವುದೇ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುವುದು ನಿಜವಾದ ಒಕ್ಕೂಟ ವ್ಯವಸ್ಥೆಯ ರೂಪ ಅದನ್ನು ಮರೆತರೆ ಕನ್ನಡಿಗರು ತಕ್ಕ ಉತ್ತರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.