ADVERTISEMENT

ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು, ಪರದಾಟ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:56 IST
Last Updated 29 ಸೆಪ್ಟೆಂಬರ್ 2020, 16:56 IST

ಮಂಡ್ಯ: ಜಿಲ್ಲೆಯ ವಿವಿಧೆಡೆ ಮಂಗಳವಾರ ಭಾರಿ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ನಗರದ ಬೀಡಿ ಕಾರ್ಮಿಕರ ಕಾಲೊನಿಯ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡಿದರು.

ಬೆಳಿಗ್ಗೆಯಿಂದಲೂ ಬಿಸಿಲಿನ ವಾತಾವರಣವಿದ್ದು ಮಧ್ಯಾಹ್ನವೇ ಕೆಲಕಾಲ ಮಳೆ ಸುರಿಯಿತು. ಸಂಜೆ 6 ಗಂಟೆಗೆ ಆರಂಭಗೊಂಡ ಮಳೆ 7.30ರವರೆಗೂ ಧಾರಾಕಾರವಾಗಿ ಸುರಿಯುತ್ತಿತ್ತು. ಇಳಿಜಾರಿನ ಪ್ರದೇಶದಲ್ಲಿರುವ ಬೀಡಿಕಾರ್ಮಿಕರ ಕಾಲೊನಿಯ ಜನರು ಮಳೆಯಿಂದ ಸಂಕಷ್ಟಕ್ಕೀಡಾಗಿದ್ದರು.

ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನೀರು ಮನೆಗಳಿಗೆ ನುಗ್ಗಿತು. ಅಪಾರ ಪ್ರಮಾಣದ ನೀರು ಹರಿದು ಬಂದ ಕಾರಣ ಮನೆಯಗಳ ಒಳಗೆ ಮಂಡಿಯುದ್ದ ನೀರು ನಿಂತಿತ್ತು. ನಿವಾಸಿಗಳು ನೀರು ಹೊರಹಾಕಲು ಹರಸಾಹಸಪಟ್ಟರು. ಹಲವು ಮನೆಗಳಲ್ಲಿ ಬಟ್ಟೆ, ಧಾನ್ಯಗಳು ಜಲಾವೃತಗೊಂಡಿದ್ದರು.

ADVERTISEMENT

ನಿರಂತರ ಮಳೆಯಿಂದಾಗಿ ರಸ್ತೆಗಳ ತುಂಬೆಲ್ಲಾ ನೀರು ಹರಿಯಿತು. ನಗರದ ಅಂಚೆ ಕಚೇರಿ, ನಗರಸಭೆ ಕಚೇರಿ ಬಳಿ ಅಪಾರ ಪ್ರಮಾಣದ ನೀರು ನಿಂತಿತ್ತು. ವಿವಿಧೆಡೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿತ್ತು. ವಾಹನಗಳಲ್ಲಿ ಓಡಾಡುವ ಜನರು ಹರಸಾಹಸಪಟ್ಟರು. ಕಾರ್ಖಾನೆ ವೃತ್ತ, ನಂದಾ ವೃತ್ತ, ಮಹಾವೀರ ವೃತ್ತ, ಜಯಚಾಮರಾಜ ವೃತ್ತಗಳು ಕೆರೆಯಂತಾಗಿದ್ದವು. ಮದ್ದೂರು, ನಾಗಮಂಗಲ, ಶ್ರೀರಂಗಪಟ್ಟಣ ತಾಲ್ಲೂಕಿನಲ್ಲೂ ಧಾರಾಕಾರ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.