
ಮಂಡ್ಯ: ‘ನನ್ನ ‘ಕತೆ ಡಬ್ಬಿ’ ಪುಸ್ತಕದಲ್ಲಿರುವ ಬಹುತೇಕ ಕತೆಗಳಿಗೆ ಜೀವಾನುಭವವೇ ಸರಕಾಗಿದೆ. ಬೆಂಗಳೂರು ನಗರದಲ್ಲಿ ನಾನು ಕಂಡ ಮತ್ತು ಅನುಭವಿಸಿದ ಪ್ರಸಂಗಗಳಿಗೆ ಅಕ್ಷರ ರೂಪ ನೀಡಲಾಗಿದೆ’ ಎಂದು ಲೇಖಕಿ, ನಟಿ ರಂಜನಿ ರಾಘವನ್ ಹೇಳಿದರು.
ಕನ್ನಡ ಕರ್ನಾಟಕ ಫೌಂಡೇಶನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಆಪ್ತ ಸಂವಾದ’ ಲೇಖಕ–ಓದುಗರ ಪಾಡ್‌ಕಾಸ್ಟ್ ಸಮಾಗಮದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋವಿಡ್ ದುರಿತ ಕಾಲದಲ್ಲಿ ದೊರೆತ ಬಿಡುವಿನ ಸಮಯವನ್ನು ಓದು ಮತ್ತು ಬರವಣಿಗೆಗೆ ಮೀಸಲಿಟ್ಟೆ. ಇದರ ಪರಿಣಾಮ ಚೆಂದದ ಕತೆಗಳು ಹೊರಬರಲು ಕಾರಣವಾಯಿತು. ಸಾಮಾಜಿಕ ಜಾಲತಾಣದಲ್ಲಿ ದೊರೆತ ಉತ್ತಮ ಪ್ರತಿಕ್ರಿಯೆಗಳಿಂದ ಮತ್ತಷ್ಟು ಕತೆಗಳನ್ನು ಬರೆಯಲು ಪ್ರೇರಣೆ ಸಿಕ್ಕಿತು ಎಂದು ಅಭಿಪ್ರಾಯ ಹಂಚಿಕೊಂಡರು.
25 ಮುದ್ರಣಗಳನ್ನು ಕಂಡ ರಂಜನಿಯವರ ‘ಕಥೆ ಡಬ್ಬಿ’ ಪುಸ್ತಕದ ಕುರಿತು ಲೇಖಕ ಹಾಗೂ ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಅವರು ರಜನಿ ಅವರೊಡನೆ ಒಂದು ಗಂಟೆ ಆಸಕ್ತಿಕರ ಸಂವಾದ ನಡೆಸಿದರು.
ಸಿನಿಮಾ ಹಾಗೂ ಕಿರುತೆರೆಯಲ್ಲಿ ಬ್ಯುಸಿ ಇದ್ದಾಗಲೂ ತಾಳ್ಮೆಯಿಂದ ಒಂದೆಡೆ ಕುಳಿತು ಕತೆ ಬರೆಯಲು ಕಾರಣವಾದ ಅಂಶ ಯಾವುದು? ಸಿನಿಮಾ ಜಗತ್ತಿನಿಂದ ಸಾಹಿತ್ಯ ಜಗತ್ತಿಗೆ ಕಾಲಿಟ್ಟಾಗ ಎದಿರಾದ ಸವಾಲುಗಳೇನು? ಓ ಹೆನ್ರಿಯ ಕಥೆಗಳಂತೆ ಬಹಳಷ್ಟು ಕಥೆಗಳ ಕಡೆಯ ಭಾಗದಲ್ಲಿ ಅನಿರೀಕ್ಷಿತ ತಿರುವುಗಳಿದ್ದರೆ ಇನ್ನಷ್ಟು ಕಥೆಗಳು ನೀತಿ ಕಥೆಯಂತಿವೆ.. ಮುಂತಾದ ಹಲವು ಪ್ರಶ್ನೆಗಳನ್ನು ವಿನಯ್ ಅವರು ರಂಜನಿಯವರ ಮುಂದಿಟ್ಟರು. ತಮ್ಮ ಬರವಣಿಗೆ ಸ್ವರೂಪ, ಹಿನ್ನೆಲೆ ಹಾಗೂ ಗುಟ್ಟುಗಳನ್ನು ರಂಜನಿ ತೆರೆದಿಟ್ಟರು.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಸಿಸ್ಟೆಂಟ್ ಕಮಿಷನರ್ ಯೋಗಾನಂದ್, ಲೆಕ್ಕ ಪರಿಶೋಧಕಿ ಪಿ. ದಿವ್ಯಾ, ಹೆಚ್ಚುವರಿ ಸರ್ಕಾರಿ ವಕೀಲರಾದ ರತಿಕುಮಾರಿ, ರೈತ ಶಾಲೆಯ ಮುಖ್ಯಸ್ಥ ಸತ್ಯಮೂರ್ತಿ, ಪರಿಚಯ ಪ್ರಕಾಶನದ ಎಂ.ಎನ್. ಶಿವಕುಮಾರ್ ಆರಾಧ್ಯ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ವಿನಯ್ ಕುಮಾರ್ ಎಂ. ಪಾಲ್ಗೊಂಡಿದ್ದರು.
ಓದಿನ ಅನುಭವ ಹಂಚಿಕೊಂಡ ಸಾಹಿತ್ಯಾಸಕ್ತರು
ಪ್ರತೀ ತಿಂಗಳು ಆಯ್ದ ಪುಸ್ತಕವೊಂದನ್ನು ಓದಿ ಆ ಸಾಹಿತಿಯ ಜೊತೆ ‘ನೇರ ಸಂವಾದ’ ನಡೆಸುವ ಸಲುವಾಗಿಯೇ ರೂಪುಗೊಂಡಿರುವ ಸಾಹಿತ್ಯ ಸಮುದಾಯದ ಭಾಗವಾಗಿದ್ದ ಓದುಗರು ರಂಜನಿಯವರೊಡನೆ ಮುಕ್ತವಾಗಿ ತಮ್ಮ ಓದಿನ ಅನುಭವಗಳನ್ನು ಹಂಚಿಕೊಂಡರು. ಕತೆಗಳು ಚೇತೋಹಾರಿಯಾಗಿದ್ದುವು ಮನೋವೈಜ್ಞಾನಿಕ ವಿಷಯಗಳ ಕುರಿತು ಬರೆದಿದ್ದೀರಿ ಸಾಮಾಜಿಕ ಸಮಸ್ಯೆ ಹಾಗೂ ಬದಲಾವಣೆ ಕುರಿತು ಕೂಡ ಬರೆದರೆ ಚೆನ್ನಾಗಿರುತ್ತದೆ ಎಂದು ಹಲವಾರು ಅಭಿಪ್ರಾಯಗಳು ವ್ಯಕ್ತವಾದುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.