ADVERTISEMENT

ಶ್ರೀರಂಗಪಟ್ಟಣ: ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ, ಮುಸ್ಲಿಂ ಮುಖಂಡರು ಭಾಗಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:05 IST
Last Updated 26 ಡಿಸೆಂಬರ್ 2025, 5:05 IST
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಐತಿಹಾಸಿಕ ಅಬ್ಬೆ ಡುಬಾಯೀಸ್ ಚರ್ಚ್‌ನಲ್ಲಿ ಗುರುವಾರ ನಡೆದ ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಾಲ್ಗೊಂಡು ಚರ್ಚ್‌ನ ಫಾ. ಸಗಾಯ್‌ ಪುಷ್ಪರಾಜ್‌ ಅವರಿಗೆ ಶುಭ ಕೋರಿದರು
ಶ್ರೀರಂಗಪಟ್ಟಣ ಸಮೀಪದ ಗಂಜಾಂನ ಐತಿಹಾಸಿಕ ಅಬ್ಬೆ ಡುಬಾಯೀಸ್ ಚರ್ಚ್‌ನಲ್ಲಿ ಗುರುವಾರ ನಡೆದ ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಾಲ್ಗೊಂಡು ಚರ್ಚ್‌ನ ಫಾ. ಸಗಾಯ್‌ ಪುಷ್ಪರಾಜ್‌ ಅವರಿಗೆ ಶುಭ ಕೋರಿದರು   

ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಗಂಜಾಂನ ಐತಿಹಾಸಿಕ ಅಬ್ಬೆ ಡುಬಾಯೀಸ್ ಚರ್ಚ್‌ನಲ್ಲಿ ಗುರುವಾರ ಕ್ರಿಸ್‌ಮಸ್‌ ಆಚರಣೆ ಸಡಗರ, ಸಂಭ್ರಮದಿಂದ ನಡೆಯಿತು.

ಚರ್ಚ್‌ನಲ್ಲಿ ಬುಧವಾರ ರಾತ್ರಿಯಿಂದಲೇ ಕ್ರಿಸ್‌ಮಸ್‌ ಆಚರಣೆಯ ವಿಧಿ, ವಿಧಾನಗಳು ಆರಂಭವಾದವು. ಬೈಬಲ್‌ ವಾಕ್ಯಗಳ ಪಠನ, ಪ್ರಾರ್ಥನೆ, ಬಲಿ ಪೂಜೆಗಳು ಜರುಗಿದವು. ಚರ್ಚ್‌ನ ಫಾ.ಸಗಾಯ್‌ ಪುಷ್ಪರಾಜ್‌ ಯೇಸು ಕ್ರಿಸ್ತನ ಜನನ ಮತ್ತು ಜೀವನ ಗಾಥೆಗಳನ್ನು ವಿವರಿಸಿದರು. ಗಾಯಕರು ಕ್ರಿಸ್ತನ ಮಹಿಮೆ ಸಾರುವ ಹಾಡುಗಳನ್ನು ಹಾಡಿದರು. ಗುರುವಾರ ಬೆಳಿಗ್ಗೆ 10 ಗಂಟೆಗೆ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕ್ಯಾರಲ್‌ ಹಾಡುಗಳನ್ನು ಹಾಡಲಾಯಿತು.

ಚರ್ಚ್‌ನ ಹೊರಗೆ ನಿರ್ಮಿಸಿದ್ದ ಗೋದಲಿ ಹಾಗೂ 30 ಅಡಿ ಎತ್ತರದ ಕ್ರಿಸ್‌ಮಸ್‌ ಸ್ಟಾರ್‌ ಗಮನ ಸೆಳೆದವು. ಸ್ಥಳೀಯರು ಮಾತ್ರವಲ್ಲದೆ ಹಾಸನ, ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ ಇತರ ಕಡೆಗಳಿಂದ ಕ್ರೈಸ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಹಿಂದೂ, ಮುಸ್ಲಿಮರು ಭಾಗಿ: ಅಬ್ಬೆ ಡುಬಾಯೀಸ್ ಚರ್ಚ್‌ನಲ್ಲಿ ಗುರುವಾರ ನಡೆದ ಕ್ರಿಸ್‌ಮಸ್‌ ಆಚರಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಾಲ್ಗೊಂಡು ಯೇಸು ಕ್ರಿಸ್ತ ಮತ್ತು ಮಾತೆ ಮೇರಿ ಅವರ ಪ್ರತಿಮೆಗಳ ಮುಂದೆ ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು. ಚರ್ಚ್‌ನ ಫಾ.ಸಗಾಯ್‌ ಪುಷ್ಪರಾಜ್‌ ಇತರ ಕ್ರೈಸ್ತರ ಜತೆ ಶುಭಾಶಯ ವಿನಿಮಯ ಮಾಡಿಕೊಂಡರು.

ಜ್ಞಾವಂತರ ವೇದಿಕೆ ಸಂಚಾಲಕ ಹಾಗೂ ವಕೀಲ ಸಿ.ಎಸ್‌. ವೆಂಕಟೇಶ್, ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಕೆ.ಟಿ. ರಂಗಯ್ಯ, ದಲಿತ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಸಮರ್ಪಣಾ ಟ್ರಸ್ಟ್‌ ಅಧ್ಯಕ್ಷ ಕೆ.ಎಸ್‌. ಜಯಶಂಕರ್‌, ಕಸಾಪ ನಗರ ಘಟಕದ ಅಧ್ಯಕ್ಷೆ ಎನ್‌. ಸರಸ್ವತಿ, ಮಾನವ ಹಕ್ಕುಗಳ ಹೋರಾಟಗಾರ ಪಾಲಹಳ್ಳಿ ಪ್ರಸನ್ನಕುಮಾರ್, ದಸಂಸ ಮುಖಂಡ ನಂಜುಂಡ ಮೌರ್ಯ, ಮುಸ್ಲಿಂ ಸೌಹಾರ್ದ ಒಕ್ಕೂಟದ ಅಯೂಬ್‌, ಚಿಕ್ಕತಮ್ಮೇಗೌಡ, ಶ್ರೀನಿವಾಸ್ ಪಾಲ್ಗೊಂಡಿದ್ದರು. ಕೇಕ್ ವಿತರಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.