ADVERTISEMENT

ಮಂಡ್ಯ | ಸಿಗದ ವಿಆರ್‌ಎಸ್‌ ಹಣ: ಮೈಷುಗರ್‌ ನಿವೃತ್ತ ನೌಕರ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 13:04 IST
Last Updated 3 ಸೆಪ್ಟೆಂಬರ್ 2025, 13:04 IST
<div class="paragraphs"><p>ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಮಹದೇವಸ್ವಾಮಿ ಅವರ ಆರೋಗ್ಯ ವಿಚಾರಿಸಿ ಕುಟುಂಬದವರೊಂದಿಗೆ ಚರ್ಚಿಸಿದರು</p></div>

ಮೈಷುಗರ್‌ ಅಧ್ಯಕ್ಷ ಸಿ.ಡಿ.ಗಂಗಾಧರ್‌ ಅವರು ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಮಹದೇವಸ್ವಾಮಿ ಅವರ ಆರೋಗ್ಯ ವಿಚಾರಿಸಿ ಕುಟುಂಬದವರೊಂದಿಗೆ ಚರ್ಚಿಸಿದರು

   

ಮಂಡ್ಯ: ವಿ.ಆರ್‌.ಎಸ್‌ (ಸ್ವಯಂ ನಿವೃತ್ತಿ ಯೋಜನೆ) ಹಣ ನೀಡಿಲ್ಲ ಎಂಬ ಕಾರಣಕ್ಕೆ ಮೈಷುಗರ್‌ ಕಾರ್ಖಾನೆಯಿಂದ ಸ್ವಯಂ ನಿವೃತ್ತಿ ಪಡೆದ ನೌಕರನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಹುಲಿವಾನ ಗ್ರಾಮದಲ್ಲಿ ಬುಧವಾರ ನಡೆದಿದೆ.

ಗ್ರಾಮದ ಮಹದೇವಸ್ವಾಮಿ ಎಂಬಾತ ‘ಮೈಷುಗರ್ ಕಾರ್ಖಾನೆ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿಯೇ ನನ್ನ ಸಾವಿಗೆ ನೇರ ಹೊಣೆ’ ಎಂದು ಆರೋಪಿಸಿ ವಿಷ ಕುಡಿಯುತ್ತಿರುವ ವಿಡಿಯೊ ಮಾಡಿದ್ದರು. ಮಹದೇವಸ್ವಾಮಿ ಅವರು ಪ್ರಸ್ತುತ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ADVERTISEMENT

‘2016ರಲ್ಲಿ ವಿ.ಆರ್‌.ಎಸ್‌ ಅನ್ನು ತೆಗೆದುಕೊಂಡಿದ್ದು, ಬರಬೇಕಾದ ಹಣ ನೀಡುವುದಕ್ಕೆ ಹಲವು ಬಾರಿ ಸುತ್ತಾಡಿಸಿದ್ದರು. ಪ್ರಸ್ತುತ ಆಡಳಿತ

ಮಂಡಳಿಯ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ. ನ್ಯಾಯ ಸಿಗದ ಕಾರಣ ‘ವಿಷ’ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಮಹದೇವಸ್ವಾಮಿ ಅವರ ಪತ್ನಿ ಮತ್ತು ಮಕ್ಕಳು ಆರೋಪಿಸಿದ್ದಾರೆ.

ಆರೋಪ ನಿರಾಕರಣೆ: ವಿಷಯ ತಿಳಿದು ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಮೈಷುಗರ್‌ ಅಧ್ಯಕ್ಷ ಸಿ.ಡಿ. ಗಂಗಾಧರ ಅವರು, ಚಿಕಿತ್ಸೆ ಪಡೆಯುತ್ತಿದ್ದ ಮಹದೇವಸ್ವಾಮಿ ಅವರ ಆರೋಗ್ಯ ವಿಚಾರಿಸಿ ಅವರ ಕುಟುಂಬದವರಿಗೆ ಧೈರ್ಯ ತುಂಬಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ವಜಾಗೊಂಡ ನೌಕರನಾಗಿರುವ ಮಹದೇವಸ್ವಾಮಿ ಅವರು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ಆದರೆ, ವಿ.ಆರ್‌.ಎಸ್‌ ಹಣ ಪಡೆಯಲು ಕಾನೂನು ಚೌಕಟ್ಟಿನಲ್ಲಿ ಏನೆಲ್ಲಾ ಮಾಡಬೇಕೆಂಬುದನ್ನೂ ತಿಳಿಸಿ ಸಲಹೆ ನೀಡಿದ್ದೆ. ಅದನ್ನು ಅವರು ಪಾಲಿಸಿಲ್ಲ ಏನು ಮಾಡಲಿ’ ಎಂದರು.

‘ನ್ಯಾಯಾಲಯಕ್ಕೆ ಹೋಗಿ ವಿ.ಆರ್‌.ಎಸ್‌ ಹಣಕ್ಕಾಗಿ ಅನುಮತಿ ಪಡೆದುಕೊಂಡು ಬನ್ನಿ. ಏಕೆಂದರೆ ವಜಾಗೊಂಡ ನೌಕರರಿಗೆಲ್ಲ ವಿಆರ್‌ಎಸ್‌ ಹಣ ನೀಡಲು ಸಾಧ್ಯವೇ? ಇಷ್ಟು ವರ್ಷಗಳು ಕಳೆದಿವೆ, ನನ್ನ ಅವಧಿಯಲ್ಲಿ ವಜಾಗೊಂಡ ನೌಕರರಿಗೆ ವಿಆರ್‌ಎಸ್ ಹಣ ಬಿಡೆಗಡೆ ಮಾಡಿದರೆ ತಪ್ಪು ಸಂದೇಶ ಬರುವುದಿಲ್ಲವೇ? ಈಗಲೂ ಅವರ ಮಕ್ಕಳ ವಿದ್ಯಾರ್ಹತೆಗೆ ತಕ್ಕಂತೆ ನಮ್ಮ ಕಾರ್ಖಾನೆಯಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ್ದೇನೆ. ಇನ್ನೂ ಯಾವ ರೀತಿ ಸಹಾಯ ಬೇಕೋ ಕಾನೂನಿನ ಚೌಕಟ್ಟಿನಲ್ಲಿ ಮಾಡಲು ಸಿದ್ಧನಿರುವೆ’ ಎಂದು ಸಿ.ಡಿ.ಗಂಗಾಧರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.