
ಮಂಡ್ಯ: ‘ಕನ್ನಡ ಭಾಷೆಯು ಜಗತ್ತಿನ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಚಾರಿತ್ರಿಕ ಭಾಷೆಯಾಗಿದೆ. ಕನ್ನಡ ಭಾಷೆಗೆ ಸರ್ವ ಭಾಷೆಗಳ ಜನರನ್ನು ಆಕರ್ಷಿಸುವ, ಸೆಳೆಯುವ ಅಯಸ್ಕಾಂತೀಯ ಗುಣವಿದೆ. ಅದು ಕನ್ನಡದ ಶಕ್ತಿ ಮತ್ತು ತಾಕತ್ತು’ ಎಂದು ಇತಿಹಾಸಕಾರ ಎಚ್.ಶ್ರೀಧರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘ ಆವರಣದ ಕೆ.ವಿ. ಶಂಕರಗೌಡ ಶಮಾನೋತ್ಸವ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ಆಯೋಜಿಸಿದ್ದ ಸಂಕ್ರಾಂತಿ ಸುಗ್ಗಿ ಸಂಭ್ರಮ, 15ನೇ ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಕ್ಕೆ ಕನ್ನಡವೇ ಸಾಕ್ಷಿ. ಕನ್ನಡ ಭಾಷೆ ಕೇವಲ ಆಡು ಭಾಷೆಯಾಗಬಾರದು. ಅದು ಹಸಿವಿನ ಭಾಷೆ, ಉಸಿರಿನ ಭಾಷೆ, ಮನಸ್ಸಿನ ಭಾಷೆ, ಹೃದಯದ ಭಾಷೆ ಹಾಗೂ ಬದುಕಿನ ಭಾಷೆಯಾಗಬೇಕು. ಪ್ರತಿಯೊಬ್ಬ ಕನ್ನಡಿಗನು ತನ್ನ ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ– ಬೆಳೆಸುವ ಗಟ್ಟಿ ಮನಸ್ಸು ಮಾಡಬೇಕು ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ‘ಕರ್ನಾಟಕ ಸೇವಾ ಭೂಷಣ’, ‘ಕನ್ನಡ ರತ್ನ’ ಹಾಗೂ ‘ಕಾವ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಸಾಹಿತಿ ಡಾ.ಚಂದ್ರಶೇಖರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ, ವೇದಿಕೆಯ ಪದಾಧಿಕಾರಿಗಳಾದ ರಾಗಿಮುದ್ದನಹಳ್ಳಿ ನಾಗೇಶ್, ಮಂಗಲ ಶಿವಣ್ಣ, ರೂಪಾ ಹೊಸಹಳ್ಳಿ, ನೇತ್ರಾ ಉಪಸ್ಥಿತರಿದ್ದರು.
ಸಂಸ್ಕೃತಿ ಪರಂಪರೆ ಹೊಂದಿದ ಶಾಂತಿಯುತ ಭಾರತದಲ್ಲಿ ನಾವು ಬದುಕುತ್ತಿದ್ದೇವೆ. ಹಲವು ರಾಷ್ಟ್ರಗಳು ಅಹಿಂಸೆಯಿಂದ ತತ್ತರಿಸುತ್ತಿವೆ. ಆ ದೇಶಗಳಿಗೆ ನಮ್ಮ ಭಾರತವು ಮಾದರಿಯಾಗಲಿ- ಡಾ.ಚಂದ್ರಶೇಖರ್ ವೈದ್ಯ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.