ADVERTISEMENT

ಮಂಡ್ಯ: ಮಹೇಶ ಜೋಶಿಗೆ ಕಪ್ಪು ಬಾವುಟ ಪ್ರದರ್ಶಿಸಲು ಸಮಾನ ಮನಸ್ಕರ ವೇದಿಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಮೇ 2025, 16:03 IST
Last Updated 8 ಮೇ 2025, 16:03 IST
   

ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಅವರು ಮೇ 9ರಂದು ನಗರಕ್ಕೆ ಬರಲಿದ್ದು, ಆ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಸಮಾನ ಮನಸ್ಕರ ವೇದಿಕೆ ನಿರ್ಧರಿಸಿದೆ.

‘ಪ್ರಜಾವಾಣಿ’ಯಲ್ಲಿ ‘ಸ್ಮರಣ ಸಂಚಿಕೆ ಬಿಡುಗಡೆಗೆ ಗ್ರಹಣ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾದ ಬೆನ್ನಲ್ಲೇ ಜೋಶಿ ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ 4ಕ್ಕೆ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಕುರಿತು ಸಮಾಲೋಚನಾ ಸಭೆ ನಡೆಸಲು ನಿರ್ಧರಿಸಿದ್ದರು. ಇದು ಗೊತ್ತಾಗುತ್ತಿದ್ದಂತೆ, ನಗರದ ಕರ್ನಾಟಕ ಸಂಘದಲ್ಲಿ ವೇದಿಕೆ ಮುಖಂಡರು ಗುರುವಾರ ಸಂಜೆ ತುರ್ತು ಸಭೆ ನಡೆಸಿ, ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಹಿಂದಿನ ವರ್ಷ ಡಿ.20ರಿಂದ 22ರವರೆಗೆ ನಡೆದ 87ನೇ ನುಡಿಜಾತ್ರೆ ಮುಗಿಸಿಕೊಂಡು ಹೋದ ಜೋಶಿ ಅವರು ನಾಲ್ಕೂವರೆ ತಿಂಗಳ ನಂತರ ಜಿಲ್ಲೆಗೆ ಬರುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮ್ಮೇಳನದ ಲೆಕ್ಕ ಕೊಡುವ ಪತ್ರಿಕಾಗೋಷ್ಠಿಗೂ ಅವರು ಗೈರಾಗಿದ್ದರು.

ADVERTISEMENT

‘ಸಮ್ಮೇಳನಕ್ಕೆ ದುಡಿದ ಜಿಲ್ಲಾ ಕಸಾಪ ಸದಸ್ಯರು ಮತ್ತು ಕನ್ನಡ ಮನಸುಗಳಿಗೆ ಕೃತಜ್ಞತೆ ಸಲ್ಲಿಸಲು ಇದುವರೆಗೂ ಜಿಲ್ಲೆಗೆ ಬಂದಿಲ್ಲ’ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗಿತ್ತು. ಸಮ್ಮೇಳನ ಮುಗಿದ ತಕ್ಷಣವೇ ಕಸಾಪ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಜೋಶಿ ವಜಾಗೊಳಿಸಿದ್ದರು. ಅದರ ವಿರುದ್ಧ ಸಮಿತಿಯವರು ತಡೆಯಾಜ್ಞೆ ತಂದಿದ್ದಾರೆ.

‘ಕಸಾಪ ಸದಸ್ಯರಿಗೆ ನೋಟಿಸ್‌ ನೀಡಿ ಬೆದರಿಕೆ ಒಡ್ಡಿರುವುದು, ತಪ್ಪನ್ನು ಪ್ರಶ್ನಿಸಿದವರ ಸದಸ್ಯತ್ವ ರದ್ದು ಮಾಡಿರುವುದು, ಪರಮಾಧಿಕಾರಕ್ಕಾಗಿ ಬೈಲಾ ತಿದ್ದುಪಡಿಗೆ ಮುಂದಾಗಿರುವುದು, ಸಮ್ಮೇಳನದ ಅನುದಾನದಲ್ಲಿ ಪಡೆದ ₹2.50 ಕೋಟಿಯ ಲೆಕ್ಕವನ್ನು ನೀಡದಿರುವುದು, ಸ್ಮರಣ ಸಂಚಿಕೆ ಬಿಡುಗಡೆಗೆ ಅಡ್ಡಗಾಲು ಹಾಕಿರುವುದು– ಈ ಎಲ್ಲ ಸರ್ವಾಧಿಕಾರಿ ಧೋರಣೆ ಖಂಡಿಸಿ ವೇದಿಕೆ ವತಿಯಿಂದ ಪ್ರತಿಭಟಿಸಲು ತೀರ್ಮಾನಿಸಿದ್ದೇವೆ’ ಎಂದು ಪ್ರೊ.ಜಯಪ್ರಕಾಶಗೌಡ ಮತ್ತು ಸುನಂದಾ ಜಯರಾಂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.