ADVERTISEMENT

ಸ್ವಚ್ಛತೆ, ಆರೋಗ್ಯದ ದೃಷ್ಟಿಯಿಂದ ಮಹತ್ವದ್ದು: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಮಲತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:07 IST
Last Updated 3 ಫೆಬ್ರುವರಿ 2026, 5:07 IST
ಪಾಂಡವಪುರ ಪಟ್ಟಣದ ಮೈಸೂರು ರಸ್ತೆಯ ರಿಲಾಯನ್ಸ್‌ ಪೆಟ್ರೋಲ್ ಬಂಕ್ ಹಿಂಭಾಗ ಜಮೀನಿನಲ್ಲಿ ಯುಜಿಡಿಯ ಎಫ್‌ಎಸ್‌ಟಿಪಿ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಗಣ್ಯರು ಭೂಮಿಪೂಜೆ ನೆರವೇರಿಸಿದರು
ಪಾಂಡವಪುರ ಪಟ್ಟಣದ ಮೈಸೂರು ರಸ್ತೆಯ ರಿಲಾಯನ್ಸ್‌ ಪೆಟ್ರೋಲ್ ಬಂಕ್ ಹಿಂಭಾಗ ಜಮೀನಿನಲ್ಲಿ ಯುಜಿಡಿಯ ಎಫ್‌ಎಸ್‌ಟಿಪಿ ಘಟಕ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಗಣ್ಯರು ಭೂಮಿಪೂಜೆ ನೆರವೇರಿಸಿದರು   

ಪಾಂಡವಪುರ: ಪಟ್ಟಣದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಒಳಚರಂಡಿಯ ಮಲತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಎಸ್‌ಟಿಪಿ) ನಿರ್ಮಾಣ ಕಾಮಗಾರಿಗೆ ಪಟ್ಟಣದ ಮೈಸೂರು ರಸ್ತೆಯ ರಿಲಾಯನ್ಸ್‌ ಪೆಟ್ರೋಲ್ ಬಂಕ್ ಹಿಂಭಾಗದ ಜಮೀನಿನಲ್ಲಿ ಸೋಮವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪಟ್ಟಣದ ನೈರ್ಮಲ್ಯ ಮತ್ತು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದ್ದು, ಈ ಹಿಂದೆ ಶಾಸಕರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಮತ್ತು ಸಿ.ಎಸ್.ಪುಟ್ಟರಾಜು ಅವರ ಪ್ರಯತ್ನದಿಂದಾಗಿ ಈಗ ಕಾರ್ಯರೂಪಕ್ಕೆ ಬರುತ್ತಿದೆ. ₹20 ಕೋಟಿ ವೆಚ್ಚದಲ್ಲಿ ಈಗ ಎಸ್‌ಎಸ್‌ಟಿಪಿ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ. ಇಷ್ಟರಲ್ಲಿಯೇ ₹2.5ಕೋಟಿ ವೆಚ್ಚದಲ್ಲಿ ಮಲಿನ ನೀರು ಸಂಸ್ಕರಣಾ ಘಟಕ ಎಫ್‌ಎಸ್‌ಟಿಪಿ ನಿರ್ಮಾಣಕ್ಕೂ ಚಾಲನೆ ನೀಡಲಾಗುವುದು. ಅಲ್ಲದೆ ಘಟಕಗಳ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡಿರುವ ರೈತ ಕುಟುಂಬದ ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಎಫ್‌ಎಸ್‌ಟಿಪಿ ನಿರ್ಮಾಣ ಕಾರ್ಯವು ಮೂರು ತಿಂಗಳ ಒಳಗಾಗಿ ಮುಗಿಯಲಿದೆ. ಜತೆಗೆ ಎಸ್‌ಟಿಪಿ ನಿರ್ಮಾಣ ಕಾರ್ಯವ‌ನ್ನು ಶೀಘ್ರದಲ್ಲಿಯೇ ಪ್ರಾರಂಭಿಸಿ ಒಂದು ವರ್ಷದ ಒಳಗಾಗಿ ಪೂರ್ಣಗೊಳಿಸಲಾಗುವುದು. ಈ ಎರಡು ಘಟಕಗಳಿಂದ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಬಸವರಡ್ಡೆಪ್ಪ ರೋಣದ, ಪುರಸಭೆ ಎಂಜಿನಿಯರ್ ಚೌಡಪ್ಪ, ಗುತ್ತಿಗೆದಾರ ಗೌರೀಶ್, ಪುರಸಭೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಹಾಗೂ ರೈತ ಸಂಘದ ಮುಖಂಡರು ಸಮಾರಂಭದಲ್ಲಿ ಇದ್ದರು.

ರೈತರಿಗೆ ವೈಜ್ಞಾನಿಕ ಪರಿಹಾರ
ಎಫ್‌ಎಸ್‌ಟಿಪಿ ಮತ್ತು ಎಸ್‌ಟಿಪಿ ಘಟಕ ನಿರ್ಮಾಣಕ್ಕೆ ಸರ್ಕಾರವು ಗುಂಟೆಗೆ ಕೇವಲ ₹7 ಸಾವಿರ ಪರಿಹಾರ ನೀಡಿ 13 ಮಂದಿ ರೈತರ 5.20 ಎಕರೆ ನೀರಾವರಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಈ ವೇಳೆ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪ್ರತಿರೋಧ ವ್ಯಕ್ತಪಡಿಸಿ, ರೈತರ ಜಮೀನಿಗೆ ವೈಜ್ಞಾನಿಕ ಬೆಲೆ ನೀಡಲು ಪ್ರತಿಭಟನೆ ನಡೆಸಿದ್ದರು. ಜತೆಗೆ ರೈತರಿಂದ ಲೋಕ ಅದಾಲತ್‌ಗೆ ಅರ್ಜಿ ಸಲ್ಲಸಿದ್ದರು. ಇದರ ಫಲವಾಗಿ ಜಮೀನು ಕಳೆದುಕೊಂಡ ರೈತರಿಗೆ ಗುಂಟೆಗೆ ₹10ಲಕ್ಷ ಪರಿಹಾರ ದೊರೆತಿದೆ ಎಂದು ತಿಳಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಮೀನು ಕಳೆದುಕೊಂಡ ರೈತರನ್ನು ಸನ್ಮಾನಿಸಿದರು.

ಪ್ರತಿರೋಧ
ಪಟ್ಟಣದಲ್ಲಿ ಯುಜಿಡಿ ಯೋಜನೆಯ 20 ವರ್ಷಗಳ ಬಳಿಕ ಎಫ್‌ಎಸ್‌ಟಿಪಿ ಮತ್ತು ಎಸ್‌ಟಿಪಿ ಘಟಕಗಳು ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಇದಕ್ಕೆ ರೈತರ ಬೇಡಿಕೆಗಳೇ ಕಾರಣ ಎಂದು ಪುರಸಭೆ ಮಾಜಿ ಸದಸ್ಯ ಎಂ.ಗಿರೀಶ್ ಸಭೆಯಲ್ಲಿ ಹೇಳಿದಾಗ, ರೈತ ಸಂಘದ ಕಾರ್ಯಕರ್ತರು ಆಕ್ಷೇಪಣೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಹಾರೋಹಳ್ಳಿ ಸತೀಶ್ ಕುಮಾರ್, ಜೀವನಕ್ಕೆ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡಿರುವ ರೈತರ ಹಿತಕ್ಕಾಗಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಹೋರಾಟ ನಡೆಸಿದ್ದರು. ಈ ವೇಳೆ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಇದನ್ನು ವಿರೋಧಿಸಿದ್ದರು. ಇದನ್ನು ಅರಿಯದ ಎಂ.ಗಿರೀಶ್ ಅವರು ಸಿ.ಎಸ್.ಪುಟ್ಟರಾಜು ಪರ ವಕಾಲತ್ತು ವಹಿಸುತ್ತಿರುವುದು ಸರಿಯಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.