ADVERTISEMENT

ಮಂಡ್ಯ | ಶಿವರಾತ್ರಿಗೆ ಸಡಗರದ ಸಿದ್ಧತೆ: ವಿಶೇಷ ಪೂಜೆ, ರಾತ್ರಿಯಿಡೀ ಜಾಗರಣೆ

ಶಿವಾಲಯಗಳಲ್ಲಿ ಸಕಲ ಸಿದ್ಧತೆ, ರುದ್ರಾಭಿಷೇಕ ವಿಶೇಷ, ಪ್ರಸಾದ ವಿತರಣೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 14:14 IST
Last Updated 20 ಫೆಬ್ರುವರಿ 2020, 14:14 IST
ಕಲ್ಲಹಳ್ಳಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಯಿತು
ಕಲ್ಲಹಳ್ಳಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಶಿವರಾತ್ರಿ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಯಿತು   

ಮಂಡ್ಯ: ಶಿವರಾತ್ರಿ ಹಬ್ಬ ಆಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಶಿವಾಲಯಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಗುರುವಾರ ರಾತ್ರಿಯಿಂದಲೇ ದೇವಾಲಯಗಳಲ್ಲಿ ಧಾರ್ಮಿಕ ಚಟುವಟಿಕೆ ಆರಂಭವಾಗಿದ್ದು, ಶುಕ್ರವಾರ ಮುಂಜಾನೆಯಿಂದ ರಾತ್ರಿಯಿಡೀ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಗುತ್ತಲು ಬಡಾವಣೆಯ ಅರಕೇಶ್ವರ ದೇವಾಲಯದಲ್ಲಿ ಶುಕ್ರವಾರ ಸಾವಿರಾರು ಭಕ್ತರು ದೇವರ ದರ್ಶನ ಪಡೆಯುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿ ಸಿಬ್ಬಂದಿ ಭಕ್ತರಿಗೆ ಅನುಕೂಲವಾಗುವಂತೆ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರು ಸಾಲಿನಲ್ಲಿ ಬಂದು ದರ್ಶನ ಪಡೆಯಲು ಬ್ಯಾರಿಕೇಡ್‌ ವ್ಯವಸ್ಥೆ ಮಾಡಲಾಗಿದೆ.

‘ಪೇಟೆಬೀದಿಯ ಸಕಲೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 7ರಿಂದ 11ರವರೆಗೂ ರುದ್ರಾಭಿಷೇಕ ನಡೆಯಲಿದೆ. ಸಂಜೆ 4 ಗಂಟೆಯಿಂದ ಶನಿವಾರ ಬೆಳಿಗ್ಗೆವರೆಗೆ ಜಾಗರಣೆ, ವಿಶೇಷ ಪೂಜೆ ನಡೆಯಲಿದೆ. ಶನಿವಾರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುವುದು’ ಎಂದು ಅರ್ಚಕ ಸುರೇಶ್‌ ದೀಕ್ಷಿತ್‌ ಹೇಳಿದರು.

ADVERTISEMENT

ಕಲ್ಲಹಳ್ಳಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ನಂತರ 108 ಲೀಟರ್‌ ಹಾಲಿನ ಅಭಿಷೇಕ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಕಲ್ಲಹಳ್ಳಿಯ ಶ್ರೀಕಂಠೇಶ್ವರ ದೇವಾಲಯ, ಗಾಂಧಿನಗರದ ಮಲೆ ಮಹದೇಶ್ವರ ದೇವಾಲಯ, ವಿದ್ಯಾನಗರದ ಶಂಭುಲಿಂಗೇಶ್ವರ ದೇವಾಲಯ, ನೂರು ಅಡಿ ರಸ್ತೆಯ ಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೂ ರಾತ್ರಿವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಖರೀದಿ ಜೋರು: ಶಿವರಾತ್ರಿ ಹಬ್ಬಕ್ಕೆ ಅವಶ್ಯಕವಾದ ವಸ್ತುಗಳನ್ನು ಖರೀದಿಸಲು ನಗರದ ತರಕಾರಿ ಮಾರುಕಟ್ಟೆ, ವಿವಿ ರಸ್ತೆ, ಹೊಸಹಳ್ಳಿ ವೃತ್ತ ಸೇರಿ ವಿವಿಧೆಡೆ ಗುರುವಾರ ಜನಜಾತ್ರೆ ಸೇರಿತ್ತು. ಸಂಜೆ ಮಹಾವೀರ ಸರ್ಕಲ್ ರೈಲ್ವೆ ಗೇಟ್‌ ಬಳಿ ಟ್ರಾಫಿಕ್‌ ಜಾಮ್‌ ಉಂಟಾಗಿ ಜನರು ಪರದಾಡಿದರು.

ಹಬ್ಬದ ಅಂಗವಾಗಿ ಹೂವು, ಹಣ್ಣಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.