ADVERTISEMENT

ಮಂಡ್ಯ: ಗಾಯಕ ಕಿಕ್ಕೇರಿ ಕೃಷ್ಣಮೂರ್ತಿಗೆ ಪರಿಸರ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:30 IST
Last Updated 11 ಫೆಬ್ರುವರಿ 2026, 7:30 IST
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಮಂಗಳವಾರ ಪರಿಸರ ಸಂರಕ್ಷಣಾ ಸಮಿತಿಯಿಂದ ‘ಪರಿಸರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ವೆಂಕಟೇಶ್, ಅಭಿಷೇಕ್, ಪುಟ್ಟೇಗೌಡ, ಮಹೇಶ್, ಶಿಲ್ಪಾ, ಬಸವರಾಜು, ಕಾವೇರಮ್ಮ, ಮಹದೇವಪ್ಪ ಇದ್ದಾರೆ
ಕಿಕ್ಕೇರಿ ಹೋಬಳಿಯ ಊಗಿನಹಳ್ಳಿ ಗ್ರಾಮದಲ್ಲಿ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಅವರಿಗೆ ಮಂಗಳವಾರ ಪರಿಸರ ಸಂರಕ್ಷಣಾ ಸಮಿತಿಯಿಂದ ‘ಪರಿಸರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ವೆಂಕಟೇಶ್, ಅಭಿಷೇಕ್, ಪುಟ್ಟೇಗೌಡ, ಮಹೇಶ್, ಶಿಲ್ಪಾ, ಬಸವರಾಜು, ಕಾವೇರಮ್ಮ, ಮಹದೇವಪ್ಪ ಇದ್ದಾರೆ   

ಕಿಕ್ಕೇರಿ: ಗಾಯಕನಾಗಿ ಮಾಡಿರುವ ಸೇವೆ ಆನಂದಕ್ಕಿಂತ ಇಮ್ಮಡಿಯಾಗಿ ಪರಿಸರ ಪ್ರೇಮದ ಸೇವೆ ಬಲು ತೃಪ್ತಿ ನೀಡಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕ ಪರಿಸರ ಪ್ರೇಮಿ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.

ಹೋಬಳಿಯ ಗಡಿಭಾಗದ ಊಗಿನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಪರಿಸರ ಸಂರಕ್ಷಣಾ ಸಮಿತಿ ಮಂಗಳವಾರ ನೀಡಿದ ’ಪರಿಸರ ರತ್ನ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ತಾನಿಂದು ಪರಿಸರಪ್ರೇಮಿಯಾಗಿ ಪರಿಸರ ಜಾಗೃತಿ, ಕನ್ನಡ ಶಾಲೆ, ಸರ್ಕಾರಿ ಶಾಲೆ ಉಳಿಸಲು ಆರಂಭಿಸಿರುವ ಅಭಿಯಾನಕ್ಕೆ ಗ್ರಾಮೀಣ ಪ್ರದೇಶದ ಮುಗ್ಧ ಜನತೆ ನೀಡಿರುವ ಪ್ರೀತಿ, ಆತಿಥ್ಯ ಕಾರಣ. ಮಕ್ಕಳ ಮನಸ್ಸನ್ನು ಸುಗಮ ಸಂಗೀತದಲ್ಲಿ ಕಟ್ಟುತ್ತಿದ್ದೆ. ಸಾಲುಮರದ ತಿಮ್ಮಕ್ಕ, ಊಗಿನಹಳ್ಳಿ ವೆಂಕಟೇಶ್ ಅವರಂತಹ ಪರಿಸರ ಪ್ರೇಮಿಗಳ ಆದರ್ಶಕ್ಕೆ ಮನಸೋತಿರುವೆ. ಮಕ್ಕಳ ಮನಸ್ಸು ಕಟ್ಟಿ ಪರಿಸರ ಜಾಗೃತಿ ಮೂಡಿಸಲು ಮುಂದಾಗಿರುವೆ ಎಂದರು.

ADVERTISEMENT

ತನಗೆ ರಾಜ್ಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಹೆಸರು ಲಭಿಸಿದೆ. ಎಲ್ಲಕ್ಕಿಂತಲೂ ಬೆಲೆಕಟ್ಟಲಾಗದ ಪ್ರಶಸ್ತಿ ತನಗೆ ಪರಿಸರ ರತ್ನನಾಗಿ ಲಭಿಸಿರುವುದು ಸೌಭಾಗ್ಯ. ತಾನಿಂದು ಪ್ರತಿ ಊರಿಗೆ ಭೇಟಿ, ಕಾರ್ಯಕ್ರಮಕ್ಕೂ ಮುನ್ನ ಗಿಡ ನೆಟ್ಟು ಬೆಳೆಸಲು ಮೊದಲ ಆದ್ಯತೆ ನೀಡಿರುವೆ. ಈಗಾಗಲೇ ನೂರಾರು ಗಿಡಗಳನ್ನು ನೆಡಲಾಗಿದೆ. ಗಿಡ ನೆಡುವುದರ ಜತೆ ಬೆಳೆಸಿ ಉಳಿಸಲು ತನ್ನದೇ ವರ್ಗವನ್ನು ನಿರ್ಮಿಸಿಕೊಂಡಿರುವೆ. ಸಮಾಜಕ್ಕೆ ಶುದ್ಧ ಗಾಳಿ ಮರಗಿಡಗಳಿಂದ ಸಿಗಲಿದೆ. ಇಂತಹ ಪರಿಸರ ಸಂರಕ್ಷಣೆ ಕಾಯಕಕ್ಕೆ ಗಾಯನದೊಂದಿಗೆ ಮೀಸಲಿಟ್ಟಿರುವೆ ಎಂದು ನುಡಿದರು.

ಮಳೆಗಾಲದಲ್ಲಿ ಸೀಡ್‌ಬಾಲ್ ಕಾಯಕಕ್ಕೆ ಮುಂದಿನ ದಿನದಲ್ಲಿ ಆಲೋಚನೆ ರೂಪಿಸಿಕೊಂಡಿರುವೆ. ಪರಿಸರ, ಸರ್ಕಾರಿ ಶಾಲೆ, ಕನ್ನಡ ಶಾಲೆ, ಮಕ್ಕಳಿಗೆ ಸುಗಮ ಸಂಗೀತ ತರಬೇತಿ ಅಭಿಯಾನ ತಾನಿಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವೆ. ತಮ್ಮ ಸಹಕಾರ ಸದಾ ಇರಲಿ ಎಂದು ವಿನಂತಿಸಿದರು.

ಶಾಲಾ ಮಕ್ಕಳಿಗೆ ಪರಿಸರಪ್ರೇಮಿ ಗಾಯಕರು ಪರಿಸರ ಗೀತೆಯನ್ನು ಹೇಳಿಕೊಟ್ಟು ಜೊತೆಯಲ್ಲಿ ಹಾಡಿ ಪರಿಸರ ಜಾಗೃತಿ ಮೂಡಿಸಿದರು. ಮಕ್ಕಳು ಪ್ರತಿಜ್ಞೆ ಮಾಡಿ ಪರಿಸರ ಉಳಿಸಲು ಗಿಡನೆಟ್ಟು ಬೆಳೆಸಿ ಉಳಿಸುವುದಾಗಿ ತಿಳಿಸಿದರು.

ಶಾಲಾವರಣದಲ್ಲಿ ಗ್ರಾಮದ ಮುಖಂಡರು ಹಣ್ಣು ಹಂಪಲು ಗಿಡವನ್ನು ಗಾಯಕರೊಂದಿಗೆ ನೆಟ್ಟು ನೀರೆರೆದರು.
ಪರಿಸರ ಪ್ರೇಮಿ ವೆಂಕಟೇಶ್, ಕಲಾವಿದರಾದ ಅಭಿಷೇಕ್ ರಾಂಪ್ರಸಾದ್, ಮುಖ್ಯಶಿಕ್ಷಕ ಪುಟ್ಟೇಗೌಡ, ಶಿಕ್ಷಕರಾದ ಮಹೇಶ್, ಶಿಲ್ಪಾ, ಮುಖಂಡರಾದ ಬಸವರಾಜು, ನಿಂಗೇಗೌಡ, ಮಂಜುನಾಥಶೆಟ್ಟಿ, ಮಂಜೇಗೌಡ, ಮಹದೇವಪ್ಪ, ದಿಲೀಪ್, ಕಾವೇರಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.