ADVERTISEMENT

ಪಾಂಡವಪುರ: ಶ್ರೀರಾಮನ ಪುಸ್ತಕ, ನಾಣ್ಯ ಪ್ರದರ್ಶನ

ಅಂಕೇಗೌಡರ ಪುಸ್ತಕರ ಮನೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 6:39 IST
Last Updated 22 ಜನವರಿ 2024, 6:39 IST
<div class="paragraphs"><p>ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿನ ಅಂಕೇಗೌಡರ ಪುಸ್ತಕದ ಮನೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ಶ್ರೀರಾಮನ ಕುರಿತ ಪುಸ್ತಕಗಳು</p></div>

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿನ ಅಂಕೇಗೌಡರ ಪುಸ್ತಕದ ಮನೆಯಲ್ಲಿ ಪ್ರದರ್ಶನಕ್ಕಿಟ್ಟಿರುವ ಶ್ರೀರಾಮನ ಕುರಿತ ಪುಸ್ತಕಗಳು

   

ಪಾಂಡವಪುರ (ಮಂಡ್ಯ): ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾನದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹರಳಹಳ್ಳಿಯ ಅಂಕೇಗೌಡರ ಪುಸ್ತಕರ ಮನೆಯಲ್ಲಿ ಶ್ರೀರಾಮನ ಕುರಿತು ಪುಸ್ತಕಗಳು, ಹತ್ತಾರು ಚಿತ್ರಪಟಗಳು ಹಾಗೂ ನಾಣ್ಯಗಳನ್ನು ಪ್ರದರ್ಶನಕ್ಕೀಡಲಾಗಿದೆ.

10 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿ ‘ಲಿಮ್ಕಾ ದಾಖಲೆ’ ಮಾಡಿರುವ ಅಂಕೇಗೌಡರು ತಮ್ಮ ‘ಪುಸ್ತಕದ ಮನೆ’ಯಲ್ಲಿನ ಪ್ರತ್ಯೇಕ ಕೊಠಡಿಯಲ್ಲಿ ಒಂದು ವಾರದವರೆಗೆ ‘ಶ್ರೀರಾಮ’ನ ಕುರಿತಾದ ಎರಡೂವರೆ ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.

ADVERTISEMENT
ಶ್ರೀರಾಮನ ನಾಣ್ಯಗಳು

‘ವಾಲ್ಮೀಕಿ ರಾಮಾಯಣ’, ‘ತೊರವೆ ರಾಮಾಯಣ’, ‘ತುಳಸೀ ರಾಮಾಯಣ’, ‘ಜನಪದ ರಾಮಾಯಣ’, ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’, ಎಂ.ವೀರಪ್ಪ ಮೊಯ್ಲಿ ಅವರ ‘ರಾಮಾಯಣ ಮಹಾನ್ವೇಷಣೆ’, ‘ಬಾಲ ರಾಮಾಯಣ’, ‘ಮಕ್ಕಳ ರಾಮಾಯಣ’, ‘ಸುಂದರ ಕಾಂಡ’, ‘ಆಧ್ಯಾತ್ಮಿಕ ರಾಮಾಯಣ’, ‘ವಚನ ರಾಮಾಯಣ’ ಸೇರಿದಂತೆ ರಾಮನಿಗೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರ ಪುಸ್ತಕಗಳನ್ನು ಇಟ್ಟಿದ್ದಾರೆ. ಈ ಪೈಕಿ ಕನ್ನಡ, ತೆಲಗು, ತಮಿಳು, ಹಿಂದಿ, ಇಂಗ್ಲಿಷ್‌ ಭಾಷೆಯಲ್ಲಿರುವ ರಾಮಾಯಣ ಪುಸ್ತಕಗಳು ಸೇರಿವೆ.

ಶ್ರೀರಾಮನ ನಾಣ್ಯ (1717 ಇಸವಿ)

ಶ್ರೀರಾಮನ ಪಟ್ಟಾಭೀಷೇಕ, ರಾಮ ರಾವಣರ ಯುದ್ಧ, ಹನುಮಂತ ಸಂಜೀವಿನಿ ಪರ್ವತ ಹೊತ್ತುಕೊಂಡು ಬರುತ್ತಿರುವುದು ಚಿತ್ರಗಳು ವಿಶೇಷವಾಗಿ ಗಮನಸೆಳೆದಿವೆ.

ನಾಣ್ಯಗಳು: ರಾಮನಿಗೆ ಸಂಬಂಧಿಸಿದ ನಾಣ್ಯಗಳಿವೆ. 1600, 1700, 1717, 1818ನೇ ಇಸವಿಯ ನಾಣ್ಯಗಳನ್ನು ಇಲ್ಲಿ ನೋಡಬಹುದು. ಈಸ್ಟ್ ಇಂಡಿಯಾ ಕಂಪನಿ ಬಿಡುಗಡೆಗೊಳಿಸಿರುವ ನಾಣ್ಯಗಳು ಶ್ರೀರಾಮ, ಸೀತೆ, ಲಕ್ಷ್ಮಣ ಜೊತೆಗಿನ ಹನುಮಂತ ಚಿತ್ರಗಳ 50 ನಾಣ್ಯಗಳಿವೆ. ಇವು ಕಂಚಿನವಾಗಿವೆ.

ಎಂ.ಅಂಕೇಗೌಡ

‘50 ವರ್ಷಗಳಲ್ಲಿ ಹಲವಾರು ರೀತಿಯ 10 ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ. ಈಗ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಪುಸ್ತಕದ ಮನೆಯಲ್ಲಿದ್ದ ಶ್ರೀರಾಮನ ಸುಮಾರು ಎರಡೂವರೆ ಸಾವಿರ ಪುಸ್ತಕಗಳನ್ನು, ಹತ್ತಾರು ಚಿತ್ರಪಟಗಳು, ನಾಣ್ಯಗಳನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಪ್ರದರ್ಶನಕ್ಕಿಟ್ಟು ನನ್ನೊಂದು ಅಳಿಲು ಸೇವೆ ಮಾಡುತ್ತಿದ್ದೇನೆ. ಶ್ರೀರಾಮನ ಭಕ್ತರು, ಇತಿಹಾಸಕಾರರು, ವಿದ್ವಾಂಸರು, ಓದುಗರು ಸೇರಿದಂತೆ ಆಸ್ತಕರೆಲ್ಲರೂ ಬಂದು ನೋಡಬಹುದಾಗಿದೆ’ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಹರಳಹಳ್ಳಿ ‘ಪುಸ್ತಕ ಮನೆ’ಯ ಎಂ.ಅಂಕೇಗೌಡ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.