ADVERTISEMENT

ಮಂಡ್ಯ | ಶ್ರೀರಂಗನಾಥನಿಗೆ ಅಮೂಲ್ಯ ದ್ರವ್ಯಗಳ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:07 IST
Last Updated 28 ನವೆಂಬರ್ 2025, 5:07 IST
ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಹಲವು ಶತಮಾನಗಳ ನಂತರ ಲೋಕ ಕಲ್ಯಾಣಾರ್ಥವಾಗಿ ನಡೆದ ಸಹಸ್ರ ಕಳಶಾಭಿಷೇಕ ಮಹೋತ್ಸವ ಅಂತಿಮ ದಿನವಾದ ಗುರುವಾರ ಶಾಸಕರ ರಮೇಶ ಬಂಡಿಸಿದ್ದೇಗೌಡ ದೇವರಿಗೆ ಅರ್ಪಿಸಲು ಅಮೂಲ್ಯ ದ್ರವ್ಯಗಳನ್ನು ತಲೆಯ ಮೇಲೆ ಹೊತ್ತು ಸಾಗಿದರು
ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಹಲವು ಶತಮಾನಗಳ ನಂತರ ಲೋಕ ಕಲ್ಯಾಣಾರ್ಥವಾಗಿ ನಡೆದ ಸಹಸ್ರ ಕಳಶಾಭಿಷೇಕ ಮಹೋತ್ಸವ ಅಂತಿಮ ದಿನವಾದ ಗುರುವಾರ ಶಾಸಕರ ರಮೇಶ ಬಂಡಿಸಿದ್ದೇಗೌಡ ದೇವರಿಗೆ ಅರ್ಪಿಸಲು ಅಮೂಲ್ಯ ದ್ರವ್ಯಗಳನ್ನು ತಲೆಯ ಮೇಲೆ ಹೊತ್ತು ಸಾಗಿದರು   

ಶ್ರೀರಂಗಪಟ್ಟಣ: ಪಟ್ಟಣದ ಇತಿಹಾಸ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯದಲ್ಲಿ, ಲೋಕ ಕಲ್ಯಾಣಾರ್ಥವಾಗಿ ಮೂರು ದಿನಗಳ ಕಾಲ ನಡೆದ ಸಹಸ್ರ ಕಳಶಾಭಿಷೇಕ ಮಹೋತ್ಸವದಲ್ಲಿ ಶ್ರೀರಂಗನಾಥ ದೇವರಿಗೆ ಗುರುವಾರ ಅಮೂಲ್ಯ ದ್ರವ್ಯಗಳನ್ನು ಅರ್ಪಿಸಲಾಯಿತು.

ಶೇಷಶಯನ ರಂಗನಾಥನಿಗೆ ಆಗಮ ಪಂಡಿತರು ಸತತವಾಗಿ ನಾಲ್ಕು ತಾಸುಗಳ ಕಾಲ ಕುಂಭಾಭಿಷೇಕದ ವಿಧಿ, ವಿಧಾನಗಳನ್ನು ನೆರವೇರಿಸಿದರು. ವಿವಿಧೆಡೆಗಳಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ವೈದಿಕರ ತಂಡ ವೇದ, ಮಂತ್ರಗಳನ್ನು ಪಠಿಸಿತು. ಕಳಶಾಭಿಷೇಕದ ಸಮಯದಲ್ಲಿ ಮಂಗಳ ವಾದ್ಯಗಳು ಮೊಳಗಿದವು. ಮಹಾ ಅಭಿಷೇಕದ ದೃಶ್ಯಗಳನ್ನು ದೇವಾಲಯದ ವಿವಿಧ ಮಂಟಪಗಳು ಮತ್ತು ಹೊರಗಿನ ಬೃಹತ್‌ ಪರದೆಯ ಮೇಲೆ ಬಿತ್ತರಿಸಲಾಯಿತು.

ದೇವಾಲಯದಲ್ಲಿ ಮುಂಜಾನೆ 5 ಗಂಟೆಗೆ ಚುತಸ್ಥಾನಾರ್ಚನಾ ಕೈಂಕರ್ಯ ಆರಂಭವಾಯಿತು. ಶಾಸಕ ರಮೇಶ ಬಂಡಿಸಿದ್ದೇಗೌಡ ಮತ್ತು ಸುಮತಿ ಬಂಡಿಸಿದ್ದೇಗೌಡ ದಂಪತಿ ಗರ್ಭಗುಡಿಯವರೆಗೆ ಬಗೆ ಬಗೆಯ ದ್ರವ್ಯಗಳನ್ನು ತಲೆಯ ಮೇಲೆ ಹೊತ್ತು ಸಾಗಿದರು. ವೈದಿಕರ ಸಲಹೆಯಂತೆ ದೇವರಿಗೆ ಸಮರ್ಪಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಪ್ರಸಿದ್ಧ ಜ್ಯೋತಿಷಿ ವಿ. ಭಾನುಪ್ರಕಾಶ್ ಶರ್ಮಾ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಉಮಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್‌ ಹಾಗೂ ಸದಸ್ಯರು ಕಳಶಾರಾಧನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದ ವೈದಿಕರ ತಂಡ ಪೂರ್ಣಾಹುತಿ, ಕಳಶಗಳಿಗೆ ಆರಾಧನೆ, ದೇವತಾ ಆರಾಧನೆ, ಕಳಶಾಭಿಷೇಕ, ಉಪಚಾರ, ಅರಿಶಿನ ಅಲಂಕಾರ, ಮೂಲ ದೇವರಿಗೆ ಮಹಾ ಕುಂಭಾಭಿಷೇಕ, ನಿವೇದನೆ, ಮಹಾ ಮಂಗಳಾರತಿ, ರಾಷ್ಟ್ರಾಶೀರ್ವಾದ ಸೇರಿದಂತೆ ಕಳಶಾಭಿಷೇಕದ ಕೈಂಕರ್ಯಗಳನ್ನು ನೆರವೇರಿಸಿತು. ಸ್ಥಳೀಯರು ಮಾತ್ರವಲ್ಲದೆ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಹರಕೆ ಹೊತ್ತವರು ಕಳಶ ಸೇವೆ ಸಲ್ಲಿಸಿದರು. ಪ್ರಸಾದ ವಿತರಣೆ ನಡೆಯಿತು.

ಶ್ರೀರಂಗನಾಥಸ್ವಾಮಿ ದೇವರ ಮೂರ್ತಿಗೆ ವೈದಿಕರು ಗುರುವಾರ ಕಳಶಾಭಿಷೇಕ ನೆರವೇರಿಸಿದರು

ಮೂರು ಸಮುದ್ರಗಳ ಜಲಾರ್ಪಣೆ ಹಿಮಾಲಯ ಪರ್ವತ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ತಂದಿದ್ದ ಅಪರೂಪದ ಗಿಡಮೂಲಿಕೆಗಳು ಹಣ್ಣುಗಳು ಸಮಿತ್ತುಗಳು ಮೂರು ಸಮುದ್ರಗಳ ಜಲ ಹತ್ತಾರು ನದಿಗಳ ನೀರನ್ನು ದೇವರಿಗೆ ಅರ್ಪಿಸಲಾಯಿತು. ಚಿನ್ನ ಬೆಳ್ಳಿ ಇತರ ಲೋಹಗಳನ್ನು ನೆನೆಸಿದ ಜಲದಿಂದ ಆದಿ ರಂಗನಿಗೆ ಅಭಿಷೇಕ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.