ಶ್ರೀರಂಗಪಟ್ಟಣ: ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮುಚ್ಚಿದ್ದು, ಮತ್ತೆ ಆರಂಭಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಶಾಲೆ 1965ರಲ್ಲಿ ಆರಂಭವಾಗಿ 2020ರ ವರೆಗೆ ಯಶಸ್ವಿಯಾಗಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ಮಕ್ಕಳ ದಾಖಲಾತಿ ಕೊರತೆ ಉಂಟಾಗಿತ್ತು. 2025ನೇ ಸಾಲಿಗೆ ಒಂದು ಮಗು ಮಾತ್ರ ಸೇರ್ಪಡೆಯಾಗಿತ್ತು. ಒಂದು ವಾರದ ಬಳಿಕ ಆ ಮಗು ಕೂಡ ಶಾಲೆಯನ್ನು ತೊರೆದಿದೆ. ಹಾಗಾಗಿ ಶಾಲೆಯನ್ನು ಶೂನ್ಯ ವಿದ್ಯಾರ್ಥಿಗಳ ಶಾಲೆ ಎಂದು ಘೋಷಿಸಿ ಮುಚ್ಚಲಾಗಿದೆ.
‘2020ರ ನಂತರ ಈ ಶಾಲೆಗೆ ಬಂದ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಮನ ಗೆಲ್ಲುವಲ್ಲಿ ವಿಫಲರಾಗಿದ್ದಾರೆ’ ಎಂದು ಗ್ರಾಮದ ಮುಖಂಡ ಎಲ್. ಸ್ವಾಮಿ ದೂರಿದ್ದಾರೆ.
‘ತಾಲ್ಲೂಕಿನ ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳೆದ ವರ್ಷ ಮುಚ್ಚಿತ್ತು. ಕೆಲವೇ ತಿಂಗಳಲ್ಲಿ ಅದು ಪುನರಾರಂಭವಾಗಿದೆ. ಖಾಸಗಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮತ್ತೆ ಸರ್ಕಾರಿ ಶಾಲೆಗೆ ಕರೆತರಲಾಗಿದೆ. ಅದೇ ರೀತಿ ಚಿನ್ನೇನಹಳ್ಳಿ ಸರ್ಕಾರಿ ಶಾಲೆಯನ್ನು ಪುನರರಾಂಭಿಸಬೇಕು’ ಎಂದು ಕುಮಾರ್ ಒತ್ತಾಯಿಸಿದ್ದಾರೆ.
‘ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನ ಚಿನ್ನೇನಹಳ್ಳಿ, ಬಲ್ಲೇನಹಳ್ಳಿ ಮತ್ತು ಮೊಳ್ಳೇನಹಳ್ಳಿ ಸರ್ಕಾರಿ ಶಾಲೆಗಳು ಮುಚ್ಚಿವೆ. ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮತ್ತೆ ಕರೆ ತರಲು ಒಂದು ತಿಂಗಳ ಕಾಲ ಸರ್ವೆ ನಡೆಸಿ ಪೋಷಕರ ಮನವೊಲಿಸುವ ಪ್ರಯತ್ನ ನಡೆಯಿತು. ಆದರೂ ಪ್ರಯೋಜನ ಆಗಲಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಮಹೇಶ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.