ಶ್ರೀರಂಗಪಟ್ಟಣ: ‘ಪಟ್ಟಣದಲ್ಲಿ ಸೆ.25ರಿಂದ 4 ದಿನಗಳ ಕಾಲ ದಸರಾ ಉತ್ಸವ ನಡೆಯಲಿದ್ದು, ಜಂಬೂ ಸವಾರಿ ಆರಂಭವಾಗುವ ಬನ್ನಿ ಮಂಟಪದ ಬಳಿ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕುಮಾರ, ಜಿ.ಪಂ. ಸಿಇಒ ಕೆ.ಆರ್. ನಂದಿನಿ ಇತರ ಅಧಿಕಾರಿಗಳ ಜತೆ ಬನ್ನಿ ಮಂಟಪ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ’ಬನ್ನಿ ಮಂಟಪದ ಬಳಿ ಆನೆಗಳು ನಿಲ್ಲುವ ಸ್ಥಳ ಮತ್ತು ಅಂಬಾರಿ ಕಟ್ಟುವ ಸ್ಥಳದಲ್ಲಿರುವ ಮರಗಳ ರೆಂಬೆಗಳನ್ನು ತೆರವು ಮಾಡಿಸಬೇಕು. ವಿದ್ಯುತ್ ತಂತಿಗಳ ಬಗ್ಗೆ ಸೆಸ್ಕ್ ಅಧಿಕಾರಿಗಳು ನಿಗಾ ವಹಿಸಬೇಕು. ಇನ್ನು ಎರಡು ದಿನಗಳಲ್ಲಿ ಬನ್ನಿ ಮಂಟಪದ ಆವರಣದಲ್ಲಿ ಸ್ವಚ್ಛತೆ ಪೂರ್ಣಗೊಳ್ಳಬೇಕು. ಬನ್ನಿ ಮಂಟಪಕ್ಕೆ ಬಣ್ಣ ಬಳಿಸಿ ದಸರಾ ಉತ್ಸವ ಆರಂಭಕ್ಕೂ ಮುನ್ನ ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಜಂಬೂ ಸವಾರಿ ಸಾಗುವ ಹೆದ್ದಾರಿಯ ರಸ್ತೆಯ ಎರಡೂ ಕಡೆ ಹಾಗೂ ರಸ್ತೆ ವಿಭಜಕವನ್ನು ಹಸನು ಮಾಡಿಸಬೇಕು’ ಎಂದು ಹೇಳಿದರು.
ಇದಕ್ಕೂ ಮುನ್ನ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯನ್ನು ರಮೇಶ ಬಂಡಿಸಿದ್ದೇಗೌಡ ಪರಿಶೀಲಿಸಿದರು. ‘ಕಲಾವಿದರು ಮತ್ತು ಸಾರ್ವಜನರಿಗೆ ಯಾವುದೇ ತೊಂದರೆಯಾಗದಂತೆ ಆಸನ ಇನ್ನಿತರ ವ್ಯವಸ್ಥೆ ಮಾಡಬೇಕು. ಜಂಬೂ ಸವಾರಿಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅಲ್ಲಲ್ಲಿ ಅಟ್ಟಣಿಗೆಗಳನ್ನು ನಿರ್ಮಿಸಬೇಕು. ವಸ್ತುಪ್ರದರ್ಶನ ಮಳಿಗೆಗಳನ್ನು ವ್ಯವಸ್ಥಿತವಾಗಿ ಸಿದ್ದಗೊಳಿಸಬೇಕು’ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕುಮಾರ ಮಾತನಾಡಿ, ‘ನಾಲ್ಕೂ ದಿನಗಳ ಕಾಲ ದಸರಾ ಉತ್ಸವ ಯಶಸ್ವಿಯಾಗಿ ನಡೆಯುವಂತೆ ಎಚ್ಚರ ವಹಿಸಬೇಕು’ ಎಂದು ಅಧಿಕಾರಿಗಳು ಸೂಚಿಸಿದರು. ‘ದಸರಾ ವಸ್ತುಪ್ರದರ್ಶನದಲ್ಲಿ ಈ ಬಾರಿ ಪುಸ್ತಕ ಮಳಿಗೆಯನ್ನು ತೆರೆಯಲಾಗುತ್ತಿದೆ’ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೇಣು ಹೇಳಿದರು.
ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಚೇತನಾ ಯಾದವ್, ಪುರಸಭೆ ಅಧ್ಯಕ್ಷ ಎಂ.ಎಲ್. ದಿನೇಶ್, ಮುಖ್ಯಾಧಿಕಾರಿ ಸತೀಶ್, ಕಿರಂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಶಾಂತಬಾಬು, ಎಇಇ ಜಸ್ವಂತ್ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.