ADVERTISEMENT

ಬೇಬಿಬೆಟ್ಟದ ಗಣಿ ಪ್ರದೇಶಕ್ಕೆ ಸುಮಲತಾ ಭೇಟಿ

ಸಣ್ಣಪುಟ್ಟ ಕಲ್ಲುಕುಟಿ ಮಾಡಲು ಅವಕಾಶ ನೀಡುವಂತೆ ಭೋವಿ ಸಮುದಾಯದವರ ಮನವಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 8:38 IST
Last Updated 15 ಜುಲೈ 2021, 8:38 IST
ಸಂಸದೆ ಸುಮಲತಾ ಬೇಬಿಬೆಟ್ಟ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು
ಸಂಸದೆ ಸುಮಲತಾ ಬೇಬಿಬೆಟ್ಟ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು   

ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ ನೀಡಿ ಗಣಿಗಾರಿಕೆ, ಕಲ್ಲು ಕ್ರಷರ್‌ಗಳನ್ನು ವೀಕ್ಷಿಸಿದರು.

ಸಂಸದೆ ಸುಮಲತಾ ಬೇಬಿಬೆಟ್ಟ ಪ್ರವೇಶಿಸುತ್ತಿದ್ದಂತೆಯೇ ಕಾವೇರಿ ಪುರದಲ್ಲಿ ಅಲ್ಲಿನ ಭೋವಿ ಸಮುದಾಯದವರು ‘ತಾವು ಹಲವು ವರ್ಷಗಳಿಂದ ಸಣ್ಣಪುಟ್ಟ ಕಲ್ಲುಕುಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ನಮಗೆ ಕಷ್ಟವಾಗಿದೆ. ನಮಗೆ ಸಣ್ಣಪುಟ್ಟ ಕಲ್ಲುಕುಟಿ ಮಾಡಲು ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಬಳಿಕ ಎಸ್‌ಎಲ್‌ವಿ ಸ್ಟೋನ್‌ ಕ್ರಷರ್, ಎಸ್‌ಟಿಜಿ ಗ್ರೂಪ್ ಸ್ಟೋನ್ ಕ್ರಷರ್, ಸಿದ್ದೇಶ್ವರ ಸ್ಟೋನ್ ಕ್ರಷರ್, ನಿತಿನ್ ಸ್ಟೋನ್ ಕ್ರಷರ್, ಕರ್ನಾಟಕ ಸ್ಟೋನ್ ಕ್ರಷರ್ ಸೇರಿದಂತೆ ಸುಮಾರು 8 ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಕಾರ್ಮಿಕರ ಮನವಿ: ‘ಕಲ್ಲು ಗಣಿಗಾರಿಕೆ ಯಿಂದ ನಾವು ಜೀವನ ನಡೆಸುತ್ತಿದ್ದೇವೆ. ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ನಮಗೆ ಕಷ್ಟವಾಗಿದೆ. ಗಣಿಗಾರಿಕೆಗೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಪರ ವಿರೋಧ ಮಾತಿನ ಚಕಮಕಿ: ಸಂಸದೆ ಸುಮಲತಾ ಭೇಟಿ ನೀಡಿದ್ದ ವೇಳೆ ಗಣಿಮಾಲೀಕರ ಪರವಾಗಿ ಕೆಲವರು ಗಣಿಗಾರಿಕೆ ಅವಕಾಶ ನೀಡಿ ಎಂದು ಘೋಷಣೆ ಕೂಗಿದರು. ಆದರೆ ಬೇಬಿ ಗ್ರಾಮ‌ ಸೇರಿದಂತೆ ಅಕ್ಕಪಕ್ಕದ ಕೆಲ ಜನರು ಗಣಿಗಾರಿಕೆ ನಿಲ್ಲಿಸಿ ನಮ್ಮ ಗ್ರಾಮಗಳನ್ನು ಉಳಿಸಿ ಎಂದು ಘೋಷಣೆ ಕೂಗಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ರೈತ ಸಂಘದ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ಚಿಕ್ಕಾಡೆ ಹರೀಶ್, ಕೆನ್ನಾಳು ವಿಜಯಕುಮಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು. ಗಣಿಗಾರಿಕೆ ನಿಲ್ಲಿಸಿ ಕೆಆರ್‌ಎಸ್ ಉಳಿಸಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಒಂದು ರೀತಿಯಲ್ಲಿ ಸಂಸದೆ ಸುಮಲತಾ ಅವರಿಗೆ ಬೆಂಬಲ ಸೂಚಿಸಿದರು.

ಸಂಸದೆ ಸುಮಲತಾ, ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷರ್‌ಗಳನ್ನು ವೀಕ್ಷಿಸಿ, ಇಲ್ಲಿನ ಗಣಿಗಾರಿಕೆಯಲ್ಲಿ ಇಷ್ಟೊಂದು ಆಳವಾಗಿ ಹೊಂಡಗಳು ನಿರ್ಮಾಣವಾಗಿವೆ. ಈ ಬಗ್ಗೆ ಮಾಹಿತಿ ನೀಡಿ ಎಂದು ಸಂಸದೆ, ಗಣಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಗಣಿ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಲು ತಡವರಿಸಿದರು. ಇದರಿಂದ ಬೇಸರಗೊಂಡ ಸಂಸದೆ, ಅಧಿಕಾರಿಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.

‘ಗಣಿ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಇದೆ. ಗಣಿಗಾರಿಕೆ ಬಗ್ಗೆ ಪೂರ್ವ ಸಿದ್ದತೆಯಾಗದೆ ಬಂದಿದ್ದಾರೆ. ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಗಣಿ ಅಧಿಕಾರಿಗಳ ಅಸಮರ್ಥತೆಯ ಬಗ್ಗೆ ಗಣಿ ಸಚಿವರ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಸಂಸದೆ ಸುಮಲತಾ ಹೇಳಿದರು.

ಇನ್ನಷ್ಟು ಸುದ್ದಿಗಳು
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.