ADVERTISEMENT

ಮಂಡ್ಯಕ್ಕೆ ಬರಲು ಜೋಶಿ ಅವರಿಗೆ ಜೀವ ಭಯವೇಕೆ?: ರೈತ ನಾಯಕಿ ಸುನಂದಾ

ರೈತ ನಾಯಕಿ ಸುನಂದಾ ಜಯರಾಂ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 0:30 IST
Last Updated 14 ಮೇ 2025, 0:30 IST
ಸುನಂದಾ ಜಯರಾಂ 
ಸುನಂದಾ ಜಯರಾಂ    

ಮಂಡ್ಯ: ‘ಕಸಾಪ ಅಧ್ಯಕ್ಷ ಮಹೇಶ ಜೋಶಿಯವರು ಮಂಡ್ಯದಲ್ಲಿ ಈಚೆಗೆ ಏರ್ಪಡಿಸಿದ್ದ ಸ್ಮರಣ ಸಂಚಿಕೆ ಸಮಾಲೋಚನಾ ಸಭೆಗೆ ಗೈರಾಗಿದ್ದಾರೆ. ನಾವು ಕಪ್ಪುಪಟ್ಟಿ ಧರಿಸಿ, ಧಿಕ್ಕಾರ ಕೂಗಿ ಪ್ರತಿಭಟಿಸಲಷ್ಟೇ ಸಜ್ಜಾಗಿದ್ದೆವು. ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶ ಖಂಡಿತ ನಮಗಿಲ್ಲ. ಮಂಡ್ಯದವರು ಕೊಲೆಗಡುಕರಲ್ಲ. ಇಲ್ಲಿಗೆ ಬರಲು ಜೋಶಿಯವರಿಗೆ ಜೀವಭಯವೇಕೆ’ ಎಂದು ರೈತ ನಾಯಕಿ ಸುನಂದಾ ಜಯರಾಂ ಪ್ರಶ್ನಿಸಿದರು.

ಕನ್ನಡ ನಾಡುನುಡಿ ಜಾಗೃತಿ ಸಮಿತಿಯು ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪರಮಾಧಿಕಾರಕ್ಕಾಗಿ ಪರಿಷತ್ತಿನ ಬೈಲಾ ತಿದ್ದುಪಡಿ, ಸಮ್ಮೇಳನದ ₹2.50 ಕೋಟಿ ಲೆಕ್ಕ ಕೊಡದಿರುವುದು ಹಾಗೂ ಪ್ರಶ್ನಿಸಿದವರ ಸದಸ್ಯತ್ವ ರದ್ದು ಮಾಡಿರುವ ವಿರುದ್ಧವಷ್ಟೇ ನಮ್ಮ ವಿರೋಧವಿದೆ. ಜೋಶಿಯವರು ಆರೋಪಗಳಿಂದ ಮುಕ್ತರಾಗುವವರೆಗೂ, ಲೆಕ್ಕ ಕೊಡುವವರೆಗೂ ಪ್ರತಿಭಟನೆ ಮಾಡುತ್ತೇವೆ’ ಎಂದರು. 

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ‘ಜೋಶಿಯವರ ಪ್ರಜಾಪ್ರಭುತ್ವ ವಿರೋಧಿ ನಡೆಯ ಬಗ್ಗೆಯಷ್ಟೇ ನಮ್ಮ ತಕಾರರಿದೆ. ಅಧ್ಯಕ್ಷರಾದವರು ಸಮ್ಮೇಳನಕ್ಕಷ್ಟೇ ಸೀಮಿತರಾಗಬಾರದು. ಗಡಿನಾಡಲ್ಲಿ ಕನ್ನಡ ಅಭಿವೃದ್ಧಿ, ಶಿಕ್ಷಣ ಮಾಧ್ಯಮ, ಹೊರರಾಜ್ಯದವರ ದಬ್ಬಾಳಿಕೆ ವಿರುದ್ಧ ಇದುವರೆಗೂ ಮಾತನಾಡಿಲ್ಲ’ ಎಂದು ದೂರಿದರು. 

ADVERTISEMENT

‘ಸಮ್ಮೇಳನ ಮುಗಿದು 4 ತಿಂಗಳಾದರೂ ಸ್ಮರಣ ಸಂಚಿಕೆ ಬಿಡುಗಡೆಯಾಗಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ನಿಯೋಗ ಜೋಶಿಯವರನ್ನು ಭೇಟಿ ಮಾಡಲು ಬೆಂಗಳೂರಿಗೆ ಹೋಗುವುದರಿಂದ ಜಿಲ್ಲೆಯ ಜನತೆಗೆ ಅವಮಾನ ಮಾಡಿದಂತಾಗುತ್ತದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಮರಣ ಸಂಚಿಕೆ ಮುದ್ರಣ ಮತ್ತು ಬಿಡುಗಡೆಗೆ ವಾರದೊಳಗೆ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ ಸಮ್ಮೇಳನಕ್ಕೆ ಕೋಟ್ಯಂತರ ರೂಪಾಯಿ ಕೊಟ್ಟು ಸುಮ್ಮನಿರುವುದು ಏಕೆ? ಸಮ್ಮೇಳನಕ್ಕೆ ಶೇ 50ರಷ್ಟು ಅನುದಾನವನ್ನು ಕಡಿತಗೊಳಿಸಿದರೆ ಆಟಾಟೋಪಗಳಿಗೆ ಕಡಿವಾಣ ಹಾಕಬಹುದು. ಗೊಂದಲಗಳನ್ನು ಪರಿಹರಿಸಲು ಮಧ್ಯಪ್ರವೇಶ ಮಾಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.