ADVERTISEMENT

ಮಳವಳ್ಳಿ: ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವಮೂರ್ತಿಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 15:27 IST
Last Updated 15 ಡಿಸೆಂಬರ್ 2025, 15:27 IST
   

ಮಳವಳ್ಳಿ: ಡಿ.22ರವರೆಗೆ ನಡೆಯಲಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದ ಅಂಗವಾಗಿ ಪಟ್ಟಣಕ್ಕೆ ಬಂದ ಶಿವಯೋಗಿಗಳ ಉತ್ಸವ ಮೂರ್ತಿಯ ಯಾತ್ರೆಗೆ ಸೋಮವಾರ ಅದ್ದೂರಿ ಸ್ವಾಗತ ನೀಡಲಾಯಿತು.

ಸೋಮವಾರ ಬೆಳಿಗ್ಗೆ 7.30ಕ್ಕೆ ಮೈಸೂರಿನ ಸುತ್ತೂರು ಮಠದ ಆವರಣದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಪೂಜೆ ಸಲ್ಲಿಸಿ ಮಳವಳ್ಳಿಯಲ್ಲಿ ನಡೆಯಲಿರುವ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದ್ದರು.

ಸುತ್ತೂರಿನಿಂದ ಹೊರಟ ಯಾತ್ರೆಯು ಟಿ.ನರಸೀಪುರ, ಬೆಳಕವಾಡಿ ಮಾರ್ಗವಾಗಿ ಸಂಜೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿತು. ಮಂಗಳವಾದ್ಯ ಹಾಗೂ ವಿವಿಧ ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.

ADVERTISEMENT

ಬೆಳಕವಾಡಿ ಗ್ರಾಮಕ್ಕೆ ಆಗಮಿಸಿದಾಗ ಶಿವಕುಮಾರಸ್ವಾಮಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರು ಕುಂಭ ಕಳಸದೊಂದಿಗೆ ಸ್ವಾಗತಿಸಿ ಬರಮಾಡಿ ಕೊಂಡರು. ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಉತ್ಸವಮೂರ್ತಿಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಸಮ್ಮುಖದಲ್ಲಿ ಪ್ರವಾಸಿ ಮಂದಿರದ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ. ಅನ್ನದಾನಿ, ಬಿಜೆಪಿ ಮುಖಂಡ ಯಮದೂರು ಸಿದ್ದರಾಜು ಅವರು ಡಾ.ಬಿ.ಆರ್.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮಗ ಸಲ್ಲಿಸಿದರು.

ಬೃಹತ್‌ ಕಮಾನು, ದ್ವಾರ ನಿರ್ಮಾಣ

ದೇಶದ ಪ್ರಥಮ ಪ್ರಜೆಯ ಸ್ವಾಗತಕ್ಕೆ ಈಗಾಗಲೇ ಪಟ್ಟಣವೆಲ್ಲ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಲವೆಡೆ ತೆಂಗಿನ ಗರಿಗಳ, ಬಾಳೆ ಎಲೆಗಳ, ಮಾವಿನ ಹಸಿರು ತೋರಣಗಳನ್ನು ಕಟ್ಟಲಾಗಿದೆ. ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದೆ. ಪಟ್ಟಣದ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಬೃಹತ್‌ ಕಮಾನುಗಳನ್ನು ನಿರ್ಮಿಸಿ ಸಿದ್ದಪ್ಪಾಜಿ, ಮಂಟೇಸ್ವಾಮಿ ದ್ವಾರಗಳನ್ನಾಗಿ ಮಾಡಲಾಗಿದೆ.

ಶಾಂತಿ ಕಾಲೇಜು ಮುಂಭಾಗದ 33 ಎಕರೆ ಪ್ರದೇಶದಲ್ಲಿ ಶಿವಯೋಗಿ ಅವರ ಉತ್ಸವಮೂರ್ತಿ ಪ್ರತಿಷ್ಠಾಪನೆಗೆ ಷಡಕ್ಷರದೇವನ ಅನುಭವ ಮಂಟಪ ಹಾಗೂ ಪ್ರಮುಖ ವೇದಿಕೆಗೆ ಜಗದ್ಗುರು ಘನಲಿಂಗ ಶಿವಯೋಗಿ ಅವರ ಹೆಸರನ್ನು ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.