ADVERTISEMENT

ತಾಳೆಗರಿಯ 9,900 ಕೃತಿಗಳ ಜ್ಞಾನಭಂಡಾರ; ಹಸ್ತಪ್ರತಿ ಸಂರಕ್ಷಣೆಗೆ ಡಿಜಿಟಲೀಕರಣ

ಮೇಲುಕೋಟೆಯ ‘ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌

ಸಿದ್ದು ಆರ್.ಜಿ.ಹಳ್ಳಿ
Published 9 ಫೆಬ್ರುವರಿ 2026, 2:55 IST
Last Updated 9 ಫೆಬ್ರುವರಿ 2026, 2:55 IST
ಮೇಲುಕೋಟೆಯ ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ತಾಳೆಗರಿಯ ಹಸ್ತಪ್ರತಿಗಳನ್ನು ಸ್ಕ್ಯಾನ್‌ ಮಾಡಿ, ಡಿಜಿಲೀಕರಣಗೊಳಿಸುತ್ತಿರುವ ಪ್ರಕ್ರಿಯೆ 
ಮೇಲುಕೋಟೆಯ ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ತಾಳೆಗರಿಯ ಹಸ್ತಪ್ರತಿಗಳನ್ನು ಸ್ಕ್ಯಾನ್‌ ಮಾಡಿ, ಡಿಜಿಲೀಕರಣಗೊಳಿಸುತ್ತಿರುವ ಪ್ರಕ್ರಿಯೆ    

ಮಂಡ್ಯ: ಮೇಲುಕೋಟೆಯ ‘ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌’ ಸಂಸ್ಥೆಯಲ್ಲಿರುವ ತಾಳೆಗರಿ ಮತ್ತು ಕಾಗದದ 5100 ಕಟ್ಟುಗಳ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಭರದಿಂದ ಸಾಗಿದೆ.

ಈ ಸಂಸ್ಥೆಯು 5100 ಕಟ್ಟುಗಳಲ್ಲಿ 9900 ಕೃತಿಗಳನ್ನು ಸಂರಕ್ಷಿಸಿದೆ. ಈ ಕೃತಿಗಳು ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಮಲೆಯಾಳಂ, ನಂದಿನಾಗರೀ ಇತ್ಯಾದಿ ಲಿಪಿಗಳಲ್ಲಿವೆ. ವೇದ ವೇದಾಂತ ವ್ಯಾಕರಣ, ಜೋತಿಷ್ಯ, ಆಗಮ, ಪುರಾಣ, ಇತಿಹಾಸ, ಆಯುರ್ವೇದ ಮುಂತಾದ ವಿಷಯಗಳನ್ನು ಒಳಗೊಂಡಿವೆ. ಶೇ 70ರಷ್ಟು ತಾಳೆಗರಿ ಮತ್ತು ಶೇ 30ರಷ್ಟು ಕಾಗದದ ಹಸ್ತಪ್ರತಿಗಳು ಇಲ್ಲಿವೆ. 

‘ಅಮೂಲ್ಯವಾದ ಜ್ಞಾನ ಭಂಡಾರವನ್ನು ಶಾಶ್ವತವಾಗಿ ಉಳಿಸಬೇಕು ಎಂಬ ಉದ್ದೇಶದಿಂದ ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳನ್ನು ಸ್ಕ್ಯಾನ್‌ ಮಾಡಿ, ವಿಷಯವಾರು ಫೈಲ್‌ಗಳನ್ನು ಕಂಪ್ಯೂಟರ್‌ನಲ್ಲಿ ಸೃಷ್ಟಿಸಿ, ಡಿಜಿಟಲೀಕರಣಗೊಳಿಸಲಾಗುತ್ತಿದೆ. ನಂತರ ಸೂಚಿಪಟ್ಟಿ ತಯಾರಿಸಿ, ಆಸಕ್ತರು ಬೇಕಾದ ವಿಷಯಗಳ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ, ಹಸ್ತಪ್ರತಿಗಳ ಸಾಹಿತ್ಯ ದೊರೆಯುವಂತೆ ಮಾಡಲಾಗುತ್ತಿದೆ’ ಎಂದು ಹಿರಿಯ ವಿದ್ವಾಂಸ ಆನಂದ್‌ ಆಳ್ವಾರ್‌ ತಿಳಿಸಿದರು.  

ADVERTISEMENT

ಹಸ್ತಪ್ರತಿಗಳನ್ನು ಕ್ರಮಸಂಖ್ಯೆ, ಸೇರ್ಪಡೆ ಸಂಖ್ಯೆ, ಕೃತಿಗಳು, ಕೃತಿಕಾರರು, ವಸ್ತು, ಲಿಪಿ, ಗಾತ್ರ, ಪತ್ರಗಳು, ಸಾಲುಗಳು, ಅಕ್ಷರಗಳು, ಪೂರ್ಣ–ಅಪೂರ್ಣ ಎಂದು ವರ್ಗೀಕರಿಸಿ ವೈಜ್ಞಾನಿಕ ಕ್ರಮದಲ್ಲಿ ಜೋಡಿಸಿ ಇಡಲಾಗಿದೆ. ತಾಳೆಗರಿಗಳು ಗೆದ್ದಲು ಹಿಡಿದು ಹಾಳಾಗದಂತೆ ನೈಸರ್ಗಿಕ ದ್ರಾವಣ ಹಚ್ಚಿ ಸಂರಕ್ಷಿಸಲಾಗುತ್ತಿದೆ. 

ಸಂಸ್ಥೆಯ ಕಿರುಪರಿಚಯ:

ಮೇಲುಕೋಟೆಯ ಐತಿಹಾಸಿಕ ಸಂಸ್ಕೃತ ಪಾಠಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ 1975ರಲ್ಲಿ ಆಗಮಿಸಿದ್ದ ರಾಷ್ಟ್ರಪತಿ ಬಿ.ಡಿ.ಜತ್ತಿ ಅವರು, ಪಾಠದ ಜೊತೆಗೆ ಸಂಶೋಧನಾ ಕಾರ್ಯ ನಡೆಯಬೇಕು ಎಂದು ಸಲಹೆ ನೀಡಿದ್ದರು. ಇದರ ಪರಿಣಾಮ ರಾಜ್ಯ ಸರ್ಕಾರ 1977ರಲ್ಲಿ ‘ಸಂಸ್ಕೃತ ಸಂಶೋಧನಾ ಸಂಸತ್‌’ ಹೆಸರಿನಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಿತು.  

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಈ ಸಂಸ್ಥೆಯು 1977ರಲ್ಲಿ ವಿಧ್ಯುಕ್ತವಾಗಿ ಆರಂಭಗೊಂಡು, ಸುವರ್ಣ ಮಹೋತ್ಸವದತ್ತ ದಾಪುಗಾಲಿಡುತ್ತಿದೆ. ಅಂದಿನಿಂದ ಇಂದಿನವರೆಗೂ ಸಂಸ್ಥೆಯು ಸಂಸ್ಕೃತ ಭಾಷೆ ಮತ್ತು ಆಚಾರ್ಯ ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತದ ವಿಚಾರ ಸಂಕಿರಣಗಳು, ಕಮ್ಮಟಗಳು, ವಿದ್ವತ್‌ ಗೋಷ್ಠಿ, ಕಂಠಪಾಠ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. 

ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುತ್ತಿರುವ ದೃಶ್ಯ 
ತಾಳೆಗರಿಯ ಹಸ್ತಪ್ರತಿಗಳು ಹಾಳಾಗದಂತೆ ನೋಡಿಕೊಳ್ಳಲು ನೈಸರ್ಗಿಕ ದ್ರಾವಣ ಲೇಪನ 
ತಾಳೆಗರಿಯ ಹಸ್ತಪ್ರತಿ 
ಹಸ್ತಪ್ರತಿಗಳು ಮತ್ತು ಬರವಣಿಗೆಯ ಸಾಧನಗಳು 

ತಾಳೆಗರಿಗಳ ವಿಶೇಷ

ಕುಮಾರವ್ಯಾಸನ ಕರ್ನಾಟಕ ಭಾರತ ಕಥಾ ಮಂಜರಿ ಹರಿಹರದೇವನ ಗಿರಿಜಾ ಕಲ್ಯಾಣ ಲಕ್ಷ್ಮೀಶನ ಜೈಮಿನಿ ಭಾರತ ಕಿರಾತಾರ್ಜುನೀಯ ಕಥಾ ಭಗವದ್ಗೀತಾ ಮಹಾಭಾರತ ರಾಮಾಯಣ ಆನಂದ ರಾಮಾಯಣ ಕನ್ನಡ ಭಾಗವತ ಕನಕಾಂಗಿ ಕಲ್ಯಾಣ ಕುಶಲವರ ಕಾಳಗ ಭಕ್ತ ಪ್ರಹ್ಲಾದ ಭದ್ರಾಚಲ ರಾಮದಾಸ ಚರಿತ್ರೆ ಭೂಕೈಲಾಸ ರತಿ ಕಲ್ಯಾಣಂ ವೈರಮುಡಿ ಶ್ರೀರಾಮ ಪಟ್ಟಾಭಿಷೇಕ ಸೌಗಂಧಿಕಾ ಪರಿಣಯ ಸುಭದ್ರಾ ಕಲ್ಯಾಣ ಸತ್ಯ ಹರಿಶ್ಚಂದ್ರ ಹರಿಭಕ್ತಿ ಸಾರ ಮುಂತಾದ ಅಮೂಲ್ಯ ಕೃತಿಗಳ ಸಾರವನ್ನು ಇಲ್ಲಿನ ತಾಳೆಗರಿಗಳ ಹಸ್ತಪ್ರತಿಗಳು ಒಳಗೊಂಡಿವೆ.  ‘500–600 ವರ್ಷಗಳ ಹಳೆಯ ಹಸ್ತಪ್ರತಿಗಳು ಇಲ್ಲಿವೆ. ಇವುಗಳನ್ನು ಅಧ್ಯಯನ ಮಾಡಲು ದೇಶ–ವಿದೇಶಗಳಿಂದ ಇತಿಹಾಸ ಸಂಶೋಧಕರು ಸಂಶೋಧನಾ ವಿದ್ಯಾರ್ಥಿಗಳು ಆಯುರ್ವೇದ ವೈದ್ಯರು ಮತ್ತು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ’ ಎಂದು ಸಿಬ್ಬಂದಿ ಬಿ.ಆರ್‌. ಉಮೇಶ್‌ ಮಾಹಿತಿ ನೀಡಿದರು. 

ಹಸ್ತಪ್ರತಿ ಸಂರಕ್ಷಣೆಗೆ ಕೈಜೋಡಿಸಿ

‘ರಾಷ್ಟ್ರೀಯ ಸಂಪತ್ತು’ ಎನಿಸಿದ ಹಸ್ತಪ್ರತಿಗಳು ಎಲ್ಲಿಯಾದರೂ ದೊರೆತರೆ ನಮ್ಮ ಸಂಸ್ಥೆಗೆ ತಂದುಕೊಡಿ. ಹಸ್ತಪ್ರತಿಗಳ ಸಂರಕ್ಷಣೆ ಮಾಡುವುದರಿಂದ ನಮ್ಮ ಭವ್ಯ ಪರಂಪರೆಯ ತಿಳಿಯುವಿಕೆಗೆ ಮತ್ತು ಭವಿಷ್ಯದ ನಿರ್ಮಾಣಕ್ಕೆ ನಾಂದಿಯಾಗುತ್ತದೆ ಎಂದು ಮೇಲುಕೋಟೆಯ ‘ಭಗವದ್‌ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌’ನ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ವಿದ್ವಾನ್‌ ಎಂ.ಪಿ.ಶೆಲ್ವ ತಿರುನಾರಾಯಣ ವಿನಂತಿಸಿದ್ದಾರೆ.  ‘2025 ಮೇ ತಿಂಗಳಿಂದ ಆರಂಭಗೊಂಡಿರುವ ಹಸ್ತಪ್ರತಿಗಳ ಡಿಜಿಟಲೀಕರಣ ಪ್ರಕ್ರಿಯೆ ಶೇ 65ರಷ್ಟು ಮುಗಿದಿದ್ದು ಇನ್ನು 6 ತಿಂಗಳಲ್ಲಿ ಬಾಕಿ ಕಾರ್ಯ ಪೂರ್ಣಗೊಳ್ಳಲಿದೆ. ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಕೆ.ಎಸ್‌. ಅಹಲ್ಯಾ ಮತ್ತು ಕುಲಸಚಿವ ಎಸ್‌.ಕುಮಾರ್‌ ಅವರ ನಿರ್ದೇಶನದ ಮೇರೆಗೆ ನಮ್ಮಲ್ಲಿರುವ ಶೇ 30ರಷ್ಟು ಅಪ್ರಕಟಿತ ಹಸ್ತಪ್ರತಿಗಳ ಪ್ರಕಟಣೆಗೆ ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.