ADVERTISEMENT

ಅನುಮತಿ ಕೊಟ್ಟರೂ ಸಿನಿಮಾ ಪ್ರದರ್ಶನ ಇಲ್ಲ, ಟಾಕೀಸ್‌ಗಳತ್ತ ಬರಲು ಜನರ ಹಿಂದೇಟು

ಎಂ.ಎನ್.ಯೋಗೇಶ್‌
Published 21 ಜುಲೈ 2021, 15:12 IST
Last Updated 21 ಜುಲೈ 2021, 15:12 IST
ಚಿತ್ರ ಪ್ರದರ್ಶನವಿಲ್ಲದೇ ನಂದಾ ಚಿತ್ರಮಂದಿರ ಬಿಕೋ ಎನ್ನುತ್ತಿರುವುದು
ಚಿತ್ರ ಪ್ರದರ್ಶನವಿಲ್ಲದೇ ನಂದಾ ಚಿತ್ರಮಂದಿರ ಬಿಕೋ ಎನ್ನುತ್ತಿರುವುದು   

ಮಂಡ್ಯ: ಚಲನಚಿತ್ರ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಿ ವಾರ ಕಳೆದರೂ ನಗರದಲ್ಲಿ ಇಲ್ಲಿಯವರೆಗೆ ಯಾವುದೇ ಚಿತ್ರಮಂದಿರಗಳು ಬಾಗಿಲು ತೆರೆದಿಲ್ಲ. ಹಳೆಯ ಪೋಸ್ಟರ್‌ಗಳೇ ಕಾಣುತ್ತಿದ್ದು ಸದಾ ಜನರಿಂದ ತುಂಬಿತುಳುಕುತ್ತಿದ್ದ ಟಾಕೀಸ್‌ಗಳ ಆವರಣ ಬಿಕೋ ಎನ್ನುತ್ತಿವೆ.

ಕೋವಿಡ್‌ ಲಾಕ್‌ಡೌನ್‌ ಸಡಿಲಗೊಂಡು ಅಂಗಡಿ ಮುಂಗಟ್ಟುಗಳು, ಮಾಲ್‌ಗಳು, ಕೈಗಾರಿಕೆಗಳು ಎಂದಿನಂತೆ ವಹಿವಾಟು ನಡೆಸುತ್ತಿವೆ. ಶೇ 50ರಷ್ಟು ಹಾಜರಾತಿಯೊಂದಿಗೆ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ. ಅನುಮತಿ ಇದ್ದರೂ ಚಿತ್ರಮಂದಿರಗಳ ಮಾಲೀಕರು ಪ್ರದರ್ಶನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಟಾಕೀಸ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ರಜೆ ಕೊಟ್ಟು ಕಳುಹಿಸಲಾಗಿದ್ದು ಅವರನ್ನು ಮತ್ತೆ ಕೆಲಸಕ್ಕೆ ಕರೆದಿಲ್ಲ.

ಹೊಸ ಚಿತ್ರಗಳಿಲ್ಲ: ಹೊಸದಾಗಿ ಯಾವುದೇ ಚಿತ್ರ ಬಿಡುಗಡೆಯಾಗದ ಕಾರಣ ಚಿತ್ರಮಂದಿರ ಆರಂಭಗೊಂಡಿಲ್ಲ ಎಂದು ಮಾಲೀಕರು ಹೇಳುತ್ತಾರೆ. ಶೇ 50ರಷ್ಟು ಹಾಜರಾತಿಗೆ ಮಾತ್ರ ಅವಕಾಶ ನೀಡಿರುವ ಕಾರಣ ದೊಡ್ಡ ಬಜೆಟ್‌ನ ಯಾವುದೇ ಚಿತ್ರಗಳನ್ನು ಬಡುಗಡೆ ಮಾಡುತ್ತಿಲ್ಲ. ನಿರ್ಮಾಪಕರು ಶೇ 100ರಷ್ಟು ಹಾಜರಾತಿ ನೀಡುವವರೆಗೂ ಕಾಯುತ್ತಿದ್ದಾರೆ. ಹಳೇ ಚಿತ್ರಗಳನ್ನು ಹಾಕಿದರೆ ಜನರು ಟಾಕೀಸ್‌ಗೆ ಬರುವುದಿಲ್ಲ. ಹೀಗಾಗಿ ಚಿತ್ರಮಂದಿರ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಮಾಲೀಕರು ಹೇಳುತ್ತಾರೆ.

ADVERTISEMENT

‘ಸೂಪರ್‌ ಸ್ಟಾರ್‌ಗಳ ಚಿತ್ರ ಹಾಕಿದರೂ ಜನರು ಚಿತ್ರಮಂದಿರಗಳತ್ತ ಕಾಲಿಡುತ್ತಿಲ್ಲ. ಹೊಸದಾಗಿ ಚಿತ್ರ ಬಿಡುಗಡೆ ಆದರಷ್ಟೇ ಜನರು ಬರುತ್ತಾರೆ. ಈ ಅವಧಿಯಲ್ಲಿ ದೊಡ್ಡ ಬಜೆಟ್‌ನ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ಧರಿಲ್ಲ. ಜನರು ಆನ್‌ಲೈನ್‌ ವೇದಿಕೆಗಳಲ್ಲಿ ಚಿತ್ರಗಳನ್ನು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚಿತ್ರಮಂದಿರ ಆರಂಭಿಸಲು ಸಾಧ್ಯವಾಗುತ್ತಿಲ್ಲ’ ಎಂದು ನಗರದ ಮಹಾವೀರ ಚಿತ್ರಮಂದಿರದ ಮಾಲೀಕ ನಾಗರಾಜು ತಿಳಿಸಿದರು.

ಸುರಕ್ಷತೆ ನೀಡುವವರು ಯಾರು?: ಸರ್ಕಾರದ ಕಾರ್ಯಸೂಚಿಯಂತೆ ಚಿತ್ರಮಂದಿರ ಆರಂಭ ಮಾಡುವುದಕ್ಕೂ ಮೊದಲು ಇಡೀ ಟಾಕೀಸ್‌ ಅನ್ನು ಸ್ಯಾನಿಟೈಸ್‌ ಮಾಡಬೇಕು. ಪ್ರತಿಯೊಬ್ಬ ಪ್ರೇಕ್ಷಕರಿಗೆ ಸ್ಯಾನಿಟೈಸರ್‌ ಕೊಡಬೇಕು. ಇತರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಷರತ್ತು ವಿಧಿಸಲಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಚಿತ್ರಮಂದಿರ ಮಾಲೀಕರು ನಷ್ಟದಲ್ಲಿದ್ದು ಸುರಕ್ಷತೆಗಾಗಿ ಮತ್ತಷ್ಟು ನಷ್ಟವಾಗುವುದು ಬೇಡ ಎಂಬ ಕಾರಣಕ್ಕೆ ಚಿತ್ರಮಂದಿರ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾರ್ಮಿಕರು ತಿಳಿಸುತ್ತಾರೆ.

ಮಾಯವಾಗದ ಭಯ: ಕೋವಿಡ್‌ ಪ್ರಕರಣಗಳ ಸಂಖ್ಯೆ, ಸಾವಿನ ಸಂಖ್ಯೆ ಕಡಿಮೆಯಾದರೂ ಜನರಿಗೆ ಇನ್ನೂ ಕೋವಿಡ್‌ ಭಯ ಮಾಯವಾಗಿಲ್ಲ. ಏನೇ ಸುರಕ್ಷತಾ ಕ್ರಮ ಕೈಗೊಂಡರೂ ಕೊರೊನಾ ಸೋಂಕು ಈಗಲೂ ಹರಡುತ್ತಿದ್ದು ಚಿತ್ರಮಂದಿರಗಳತ್ತ ಬರಲು ಜನರು ಭಯಪಡುತ್ತಿದ್ದಾರೆ.

‘ಕಳೆದ ಬಾರಿ ಸೂಪರ್‌ ಸ್ಟಾರ್‌ ನಟರು ಒತ್ತಾಯಪೂರ್ವಕವಾಗಿ ಸಿನಿಮಾ ಟಾಕೀಸ್‌ ತೆರೆಸಿದರು. ಶೇ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಿಸಿದರು. ಕೆಲವೇ ದಿನಗಳಲ್ಲಿ 2ನೇ ಅಲೆ ಆರಂಭವಾಯಿತು. ಬಿಗ್ ಬಜೆಟ್‌ ಸಿನಿಮಾ ಬಿಡುಗಡೆ ಮಾಡಿ ಸಾವಿರಾರು ಜನರನ್ನು ಚಿತ್ರ ನೋಡಲು ಬಿಟ್ಟರು. ಇದರಿಂದ ಅಪಾರ ಜನರು ಕೋವಿಡ್‌ನಿಂದ ನರಳುವಂತಾಯಿತು, ಸಾಯುವಂತಾಯಿತು. ಇನ್ನೊಮ್ಮೆ ಹೀಗಾಗುವುದು ಬೇಡ, 3ನೇ ಅಲೆಯ ಭಯವಿರುವ ಕಾರಣ ಈಗ ಟಾಕಿಸ್‌ಗಳನ್ನು ತೆರೆಯದಿರುವುದೇ ಒಳ್ಳೆಯದು’ ಎಂದು ಸುಭಾಷ್‌ನಗರದ ವ್ಯಕ್ತಿಯೊಬ್ಬರು ತಿಳಿಸಿದರು.

****

ತಮಿಳು ಚಿತ್ರ ಹಾಕಲು ಸಿದ್ಧತೆ

ಸಾಮಾನ್ಯವಾಗಿ ಶುಕ್ರವಾರ ಹೊಸ ಚಿತ್ರಗಳು ಬಿಡುಗಡೆಯಾಗುತ್ತವೆ. ವಾರದ ದಿನದಲ್ಲಿ ಚಿತ್ರಮಂದಿರ ಆರಂಭಿಸುವ ಬದಲು ಶುಕ್ರವಾರದಿಂದ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಶುಕ್ರವಾರವೂ ಯಾವುದೇ ಕನ್ನಡ ಚಿತ್ರ ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಕೆಲವು ಮಾಲೀಕರು ತಮಿಳು ಚಿತ್ರ ಹಾಕಿ ಶುಕ್ರವಾರದಿಂದ ಚಿತ್ರಮಂದಿರ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ’ ಎಂದು ಚಿತ್ರಮಂದಿರದ ಕಾರ್ಮಿಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.